ಹಾವೇರಿ: ಜಿಲ್ಲೆಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ. ಸಮ್ಮೇಳನ ಹತ್ತಿರವಾಗುತ್ತಿದ್ದಂತೆ ಸಾಹಿತಿಗಳು, ಕಲಾವಿದರು ತಮ್ಮ ಕೃತಿ ರಚನೆಯಲ್ಲಿ ನಿರತರಾಗಿದ್ದಾರೆ. ಇಂತಹ ಕಲಾವಿದರಲ್ಲಿ ಒಬ್ಬರು ಹಾವೇರಿಯ ಗಣೇಶ ರಾಯ್ಕರ್.
ಗಣೇಶ ರಾಯ್ಕರ್ ಚಿನ್ನದ ಒಡವೆ ತಯಾರಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಸಾಹಿತ್ಯ ಸಮ್ಮೇಳನಕ್ಕಾಗಿ ಸಿರಿಧಾನ್ಯಗಳಲ್ಲಿ ಭುವನೇಶ್ವರಿ ಚಿತ್ರ ರಚಿಸಿದ್ದಾರೆ. ತಮ್ಮ ದಿನನಿತ್ಯದ ವ್ಯಾಪಾರ ವಹಿವಾಟು ಮುಗಿದ ನಂತರ ರಾತ್ರಿ 12 ರಿಂದ ಎರಡು ಗಂಟೆಯವರೆಗೆ ಕುಳಿತು ಈ ವಿಶಿಷ್ಟ ಕಲಾಕೃತಿಯನ್ನ ರಚಿಸಿದ್ದಾರೆ.
ಸುಮಾರು 30 ದಿನಗಳ ಕಾಲದಲ್ಲಿ ಗಣೇಶ ರಾಯ್ಕರ್ ಕೈಯಲ್ಲಿ ಈ ಭುವನೇಶ್ವರಿ ದೇವಿ ಚಿತ್ರ ರಚನೆಯಾಗಿದೆ. ಈ ಕಲಾಕೃತಿಗೆ ಸಿರಿಧಾನ್ಯಗಳಾದ 3050 ರಾಗಿ, 500 ನವಣಿ, 165 ಕೊರಲು, 185 ಸಾಸಿವೆ ಮತ್ತು 375 ಹಾರಕಗಳನ್ನು ಬಳಸಲಾಗಿದೆ.
ಜನವರಿ 6, 7 ಮತ್ತು 8 ರಂದು ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಈ ಚಿತ್ರ ಬಿಡುಗಡೆ ಮಾಡಬೇಕು ಎನ್ನುವದು ಕಲಾವಿದ ಗಣೇಶ ರಾಯ್ಕರ್ರ ಆಸೆ. ಸಮ್ಮೇಳನ ಆರಂಭದ ದಿನ ಸ್ವತಃ ಸಿಎಂ ಬಸವರಾಜ್ ಬೊಮ್ಮಾಯಿ ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಷಿ ಮತ್ತು ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ ಈ ಕಲಾಕೃತಿ ಬಿಡುಗಡೆ ಮಾಡಿದರೆ, ನಾನು ಈ ಕಲಾಕೃತಿ ರಚಿಸಿದ್ದಕ್ಕೆ ಸಾರ್ಥಕವಾಗುತ್ತದೆ ಎನ್ನುತ್ತಾರೆ ಗಣೇಶ್.