ಹಾವೇರಿ:ಜಿಲ್ಲೆಯ ಸವಣೂರಿನ ಪ್ರಶಾಂತ್ ಮತ್ತು ಪಾರ್ವತಿ ದಂಪತಿ ಮದುವೆಯಾಗಿ 10 ವರ್ಷವಾದರೂ ಮಕ್ಕಳಾಗಿರಲಿಲ್ಲ. ಕಳೆದ 3 ವರ್ಷಗಳ ಹಿಂದೆ ಕಾರು ಚಾಲಕನೊಬ್ಬ ಈ ದಂಪತಿಗೆ ಶ್ವಾನವೊಂದನ್ನು ನೀಡಿದ್ದನು. ಅದಕ್ಕೆ ಈ ದಂಪತಿ ಟೈಸನ್ ಎಂದು ನಾಮಕರಣ ಮಾಡಿ ಸ್ವಂತ ಮಗನಂತೆ ಸಾಕಿದ್ದರು. ಆದರೆ ಅನಾರೋಗ್ಯದಿಂದ ಟೈಸನ್ ಶನಿವಾರ ನಿಧನವಾಗಿದೆ. ಈ ಹಿನ್ನೆಲೆಯಲ್ಲಿ ಮನುಷ್ಯರಿಗೆ ಮಾಡುವಂತೆ ನಾಯಿಯ ತಿಥಿ ಮಾಡುವ ಮೂಲಕ ಈ ದಂಪತಿ ಪ್ರಾಣಿ ಪ್ರೇಮ ಮೆರೆದಿದ್ದಾರೆ.
ಕಳೆದ ಕೆಲವು ದಿನಗಳಿಂದ ಟೈಸನ್ ಅನಾರೋಗ್ಯಕ್ಕೆ ತುತ್ತಾಗಿತ್ತು. ಹಲವು ಬಾರಿ ಚಿಕಿತ್ಸೆ ನೀಡಿದ್ದರೂ ಫಲಕಾರಿಯಾಗದೆ ಶನಿವಾರ ಸಾವನ್ನಪ್ಪಿತ್ತು. ಸ್ವಂತ ಮಗನನ್ನು ಕಳೆದುಕೊಂಡಂತೆ ಪಾರ್ವತಿ ಮತ್ತು ಪ್ರಶಾಂತ್ ದುಃಖ ತೃಪ್ತರಾಗಿದ್ದು, ಮನುಷ್ಯರಂತೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಮನೆಗೆ ಪ್ರವೇಶಿಸಿದ ಟೈಸನ್ ಮನೆಯ ಮಗನಂತೆ ಇತ್ತು. ಮನೆಯ ಮಕ್ಕಳು ತಂದೆ ತಾಯಿಯನ್ನ ಪ್ರೀತಿಸುವಂತೆ ತಮ್ಮ ಜೊತೆ ಒಡನಾಟ ಇಟ್ಟುಕೊಂಡಿತ್ತು. ಇಂತಹ ಟೈಸನ್ ಸಾವನಪ್ಪಿದ್ದು, ನಮಗೆ ಇನ್ನಿಲ್ಲದ ನೋವು ತಂದಿದೆ ಎಂದು ಪ್ರಶಾಂತ್ ಪತ್ನಿ ಪಾರ್ವತಿ ದುಃಖ ವ್ಯಕ್ತಪಡಿಸಿದ್ದಾರೆ.