ಬೆಂಗಳೂರು: ಕ್ರಿಮಿನಲ್ ಪ್ರಕರಣದಲ್ಲಿ ಎರಡು ಶಿಕ್ಷೆಗೆ ಒಳಗಾದ ಬಿಜೆಪಿ ಶಾಸಕ ನೆಹರೂ ಓಲೇಕಾರ ಅವರನ್ನು ಅನರ್ಹಗೊಳಿಸುವಂತೆ ಬಿಜೆಪಿ ಕಾರ್ಯಕರ್ತನೊಬ್ಬರು ರಾಜ್ಯಪಾಲರು, ವಿಧಾನಸಭೆ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.
ಹಾವೇರಿಯ ಬಿಜೆಪಿ ಕಾರ್ಯಕರ್ತ ಸಂತೋಷ್ ರೆಡ್ಡಿ ಎಂಬವರು ದೂರು ನೀಡಿದ್ದಾರೆ. ನೆಹರು ಓಲೇಕಾರ ಅನರ್ಹತೆಗೆ ಒತ್ತಾಯಿಸಿ ರಾಜ್ಯಪಾಲರು, ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ, ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ದೂರು ನೀಡಿದ್ದಾರೆ.
ಕಳೆದ ಫೆಬ್ರವರಿ 13ರಂದು ಜನಪ್ರತಿನಿಧಿಗಳ ನ್ಯಾಯಾಲಯದಿಂದ ಎರಡು ವರ್ಷ ಶಿಕ್ಷೆ ಪ್ರಕಟಿಸಿತ್ತು. ಈ ಶಿಕ್ಷೆಯ ಆದೇಶಕ್ಕೆ ಇನ್ನೂ ಹೈಕೋರ್ಟ್ ನಿಂದ ತಡೆಯಾಜ್ಞೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಕಾಯ್ದೆಯಡಿ ನೆಹರೂ ಓಲೇಕಾರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಮನವಿ ಮಾಡಿದ್ದಾರೆ.
ದೂರಿನಲ್ಲೇನಿದೆ ?ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ನೆಹರೂ ಓಲೇಕಾರ ಅವರಿಗೆ ಫೆ.13ರಂದು ನ್ಯಾಯಾಲಯ ಎರಡು ವರ್ಷದ ಸಜೆ ನೀಡಿತ್ತು. ಓಲೇಕಾರ್ ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ಗೆ ಮೊರೆ ಹೋಗಿದ್ದಾರೆ. ಆದರೆ ಹೈಕೋರ್ಟ್ ಸಿವಿಲ್ ಕೋರ್ಟ್ ನೀಡಿದ್ದ ಸಜೆಗೆ ತಡೆಯಾಜ್ಞೆ ನೀಡಿಲ್ಲ. ಜನಪ್ರತಿನಿಧಿಗಳ ಕಾಯ್ದೆಯಡಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆ ನೆಹರೂ ಓಲೇಕಾರರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ತಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಸ್ಪೀಕರ್ ಕಾಗೇರಿ ಅವರಿಗೆ ದೂರಿನಲ್ಲಿ ಕೋರಿದ್ದಾರೆ. ರಾಹುಲ್ ಗಾಂಧಿ, ಮೋದಿ ಉಪನಾಮದ ಸಂಬಂಧ ನೀಡಿದ್ದ ಹೇಳಿಕೆ ಸಂಬಂಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಡಿ ಸೂರತ್ ನ್ಯಾಯಾಲಯ ಅವರಿಗೆ ಎರಡು ವರ್ಷದ ಸಜೆ ನೀಡಿತ್ತು. ಈ ಹಿನ್ನೆಲೆ ನಿಯಮದಂತೆ ರಾಹುಲ್ ಗಾಂಧಿ ಅವರ ಸಂಸದ ಸ್ಥಾನವನ್ನು ಲೋಕಸಭೆ ಸ್ಪೀಕರ್ ಅನರ್ಹಗೊಳಿಸಿದ್ಧರು. ಈ ಅನರ್ಹತೆ ದೇಶಾದ್ಯಂತ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಇದು ಬಿಜೆಪಿಯ ದ್ವೇಷ ರಾಜಕಾರಣ ಆಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದೀಗ ರಾಜ್ಯದಲ್ಲಿ ಬಿಜೆಪಿ ಶಾಸಕ ನೆಹರೂ ಓಲೇಕಾರಗೆ ಕ್ರಿಮಿನಲ್ ಪ್ರಕರಣವೊಂದರಲ್ಲಿ ಎರಡು ವರ್ಷ ಸಜೆ ಆದರೂ ಶಾಸಕ ಸ್ಥಾನದಿಂದ ಅನರ್ಹಗೊಳಿಸದ ಸಂಬಂಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ರಾಜ್ಯ ಕೈ ನಾಯಕರು ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.