ಹಾವೇರಿ:ರಾಜ್ಯದಲ್ಲಿ ಕೆಲವೇ ಜಿಲ್ಲೆಗಳ ಅಭಿವೃದ್ಧಿಗೆ ಸೀಮಿತವಾಗಿ, ಪರಸ್ಪರ ಕಚ್ಚಾಟದಲ್ಲಿ ತೊಡಗಿದ್ದ ಸಮ್ಮಿಶ್ರ ಸರ್ಕಾರ ಕೆಡವೋದು ನಮ್ಮ ಉದ್ದೇಶವಾಗಿತ್ತು. ಹೀಗಾಗಿ ಸಮಾನ ಮನಸ್ಕ ಶಾಸಕರೆಲ್ಲರೂ ಸೇರಿಕೊಂಡು ಸಮ್ಮಿಶ್ರ ಸರ್ಕಾರ ಕೆಡವಿದ್ದೇವೆ ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಹಿರೇಕೆರೂರು ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ತನ್ನ ತಾಲೂಕಿಗೆ ದ್ರೋಹ ಆಗಿದೆ. ಕಾಂಗ್ರೆಸ್ನಿಂದ ದ್ರೋಹ ಆಗಿದ್ದರಿಂದ ಪಕ್ಷ ಬಿಟ್ಟಿದ್ದೇನೆ. ಮಾಜಿ ಸಿಎಂ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಜಮೀರ್ ಅಹಮದ್ ಅವರು ತಮಗೆ ಸಚಿವ ಸ್ಥಾನದ ಭರವಸೆ ನೀಡಿದ್ದರು. ಆದರೆ ಸಚಿವ ಸ್ಥಾನ ಸಿಗಲಿಲ್ಲ. ನಾನು ಪೊಲೀಸ್ ಇಲಾಖೆ ಕೆಲಸಕ್ಕೆ ರಾಜೀನಾಮೆ ನೀಡಿದಾಗ ಅಲ್ಲಿನ ಒಬ್ಬ ಪೊಲೀಸ್ ಅಧಿಕಾರಿ ನನ್ನ ಮೇಲೆ ಕೇಸ್ ಹಾಕಿಸಿ, ಕಿರಿಕಿರಿ ಮಾಡಿದ್ದರು. ಹಾಗೆಯೇ ಈಗಲೂ ನನಗೆ ಕಿರಿಕಿರಿಯಾಯಿತು ಎಂದರು.
ಸತ್ಯಹರಿಶ್ಚಂದ್ರರ ರೀತಿ ಮಾತನಾಡುತ್ತಿದ್ದ ಮಾಜಿ ಸ್ಪೀಕರ್ ರಮೇಶಕುಮಾರ್, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರ ಮಾತು ಕೇಳಿ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಮಾಡಿ ನಮ್ಮನ್ನ ಅನರ್ಹ ಮಾಡಿದ್ದಾರೆ. ಆದರೆ ನ್ಯಾಯಾಲಯದ ಮೇಲೆ ನಮಗೆ ನಂಬಿಕೆ ಇದ್ದು, ಗೆಲುವು ನಮ್ಮದಾಗಲಿದೆ ಎಂದರು.
ಬಿ.ಸಿ.ಪಾಟೀಲ್ ಮಾಧ್ಯಮಗೋಷ್ಠಿ ಮುಖ್ಯಮಂತ್ರಿ ಯಡಿಯೂರಪ್ಪ ಒಳ್ಳೆಯ ಮನಸ್ಸಿನವರು. ಬಿಜೆಪಿ ಸೇರುವಂತೆ ಆಹ್ವಾನ ಬಂದಿದೆ. ಆದರೆ ಕಾರ್ಯಕರ್ತರು ಮತ್ತು ಮುಖಂಡರ ಜೊತೆ ಸೇರಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಅಲ್ಲದೇ ಬಿಜೆಪಿಗೆ ಸೇರೋ ಬಗ್ಗೆ ಸಮಾನ ಮನಸ್ಕರೆಲ್ಲ ಸೇರಿ ತೀರ್ಮಾನ ಕೈಗೊಳ್ಳುತ್ತೇವೆ. ಕೆಲವು ರಾಜ್ಯಗಳ ಉದಾಹರಣೆ ನೋಡಿದರೆ ಅನರ್ಹತೆಯು ಚುನಾವಣೆಗೆ ಸ್ಪರ್ಧಿಸಲು ಅಡ್ಡಿಯಾಗುವುದಿಲ್ಲ. ಕ್ಷೇತ್ರದಲ್ಲಿ ಮೊದಲಿನಿಂದಲೂ ನನ್ನ ಜೊತೆಗಿದ್ದವರು ಈಗಲೂ ನನ್ನ ಜೊತೆಗೇ ಇದ್ದಾರೆ. ನನ್ನ ಕುರ್ಚಿ ಮೇಲೆ ತಾವು ಕೂರಬೇಕು ಎನ್ನುವ ಆಸೆ ಇರೋರು ನನ್ನ ಜೊತೆ ಬಂದಿಲ್ಲ ಅಂತಾ ಹೇಳಿದರು.
ಅಲ್ಲದೆ ಜಮ್ಮು-ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರವನ್ನ ಪಾಟೀಲ್ ಇದೇ ವೇಳೆ ಸ್ವಾಗತಿಸಿದರು.