ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ ಅನಾವೃಷ್ಠಿಯಿಂದ ಬೆಳೆ ಹಾಳು.. ಕೇಳುವವರಿಲ್ಲ ರೈತರ ಗೋಳು

ಹಾವೇರಿಯಲ್ಲಿ ಮುಂಗಾರು ಮಳೆ ಸರಿಯಾದ ಪ್ರಮಾಣದಲ್ಲಿ ಬಾರದಿರುವುದರಿಂದ ಕಬ್ಬಿನ ಇಳುವರಿ ಕಡಿಮೆಯಾಗಿದೆ. ಅಲ್ಲದೇ ಸರಿಯಾದ ಬೆಲೆಯೂ ಸಿಗದೆ ರೈತ ಕಂಗಾಲಾಗಿದ್ದಾನೆ.

ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಮರಚರೆಡ್ಡೇರ್
ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಮರಚರೆಡ್ಡೇರ್

By ETV Bharat Karnataka Team

Published : Sep 20, 2023, 11:02 PM IST

ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಮರಚರೆಡ್ಡೇರ್

ಹಾವೇರಿ :ಜಿಲ್ಲೆಯ ಅನ್ನದಾತರ ಗೋಳು ಕೇಳುವವರಿಲ್ಲದಂತಾಗಿದೆ. ಅನಾವೃಷ್ಠಿಯಿಂದ ಬೆಳೆಗಳು ಹಾಳಾಗಿದ್ದು, ರೈತರು ಅವುಗಳನ್ನ ಹರಗಿ ನಾಶಪಡಿಸುತ್ತಿದ್ದಾರೆ. ಇತ್ತ ಕೆಲ ರೈತರು ಕಬ್ಬನ್ನೇ ನಂಬಿದ್ದು ಮುಂಗಾರು ಕೈಕೊಟ್ಟಿದ್ದರಿಂದ ಕಬ್ಬು ಸಹ ನಿರೀಕ್ಷಿಸಿದ ಪ್ರಮಾಣದಲ್ಲಿ ಇಳುವರಿ ಬರದಂತಾಗಿದೆ.

ಜಿಲ್ಲೆಯಲ್ಲಿ ಎರಡು ಸಕ್ಕರೆ ಕಾರ್ಖಾನೆಗಳಿದ್ದು, ಶಿಗ್ಗಾಂವಿ ತಾಲೂಕು ಕೋಣನಕೆರೆ ಬಳಿ ಇರುವ ಸಕ್ಕರೆ ಕಾರ್ಖಾನೆಯಲ್ಲಿ ಈಗಾಗಲೇ ಟನ್ ಕಬ್ಬಿಗೆ 3070 ರೂಪಾಯಿ ನಿಗದಿ ಮಾಡಿದೆ. ಆದರೆ, ತಮ್ಮ ಕಬ್ಬಿಗೆ ಕನಿಷ್ಠ ಟನ್‌ಗೆ 3500 ರೂಪಾಯಿ ಹಣ ನೀಡುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಹಾವೇರಿ ಜಿಲ್ಲಾಧ್ಯಕ್ಷ ಭುವನೇಶ್ವರ ಒತ್ತಾಯಿಸಿದ್ದಾರೆ. ಕಬ್ಬು ಮಳೆಯಿಲ್ಲದಿರುವುದರಿಂದ ನಿರೀಕ್ಷೆ ಮಾಡಿದಷ್ಟು ಇಳುವರಿ ಬರುವುದಿಲ್ಲ. ಬಂದ ಬೆಳೆಗೆ ಸಹ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕು ಗೌರವಾಧ್ಯಕ್ಷ ಸುರೇಶ ಚಲವಾದಿ

ಕೋಣನಕೆರೆಯಲ್ಲಿರುವ ವಿಐಎನ್‌ಪಿ ಸಕ್ಕರೆ ಕಾರ್ಖಾನೆ ಮಾಜಿ ಸಚಿವ ಶಿವರಾಮ ಹೆಬ್ಬಾರ್ ಪುತ್ರ ವಿವೇಕ ಅವರ ಒಡೆತನದಲ್ಲಿದೆ. ಈ ಕಾರ್ಖಾನೆಯಲ್ಲಿ ಸಕ್ಕರೆ ಉತ್ಪಾದಿಸುವ ಜೊತೆಗೆ ಇಥೆನಾಲ್ ಸಹ ಉತ್ಪಾದಿಸಲಾಗುತ್ತದೆ. ಮಾಜಿ ಸಚಿವ ಶಿವರಾಮ ಹೆಬ್ಬಾರ್ ಪುತ್ರ ವಿವೇಕ್ ಕಬ್ಬು ಬೆಳೆಗಾರರ ಸಭೆ ಕರೆಯದೆ, ಅಧಿಕಾರಿಗಳ ಜೊತೆ ಚರ್ಚಿಸದೆ, ಅವೈಜ್ಞಾನಿಕವಾಗಿ ಕಬ್ಬಿನ ದರ ನಿಗದಿ ಮಾಡಿದ್ದಾರೆ. ಈ ಕೂಡಲೇ ವಿವೇಕ್​ ಕಬ್ಬಿನ ದರ ಪ್ರತಿಟನ್‌ಗೆ 3500 ನಿಗದಿ ಮಾಡಬೇಕು ಎಂದು ಭುವನೇಶ್ವರ್ ಒತ್ತಾಯಿಸಿದರು. 3500 ರೂಪಾಯ ದರ ನಿಗದಿ ಮಾಡುವವರೆಗೊ ಕಬ್ಬು ಬೆಳೆಗಾರರು ವಿವೇಕ್​ ಹೆಬ್ಬಾರ್ ಒಡೆತನದ ಕೋಣನಕೆರೆ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸದಂತೆ ಎಚ್ಚರಿಕೆ ನೀಡಿದ್ದಾರೆ.

ಇನ್ನು ಹಾವೇರಿ ಸಮೀಪದ ಸಂಗೂರಿನಲ್ಲಿ ಹಾವೇರಿ ಸಹಕಾರಿ ಸಕ್ಕರೆ ಕಾರ್ಖಾನೆ ಜಿ. ಎಂ ಶುಗರ್ಸ್ ಸಂಸದ ಸಿದ್ದೇಶ್ ತಮ್ಮ ಲಿಂಗರಾಜ್ ಒಡೆತನದಲ್ಲಿದೆ. ಈ ಕಾರ್ಖಾನೆಯಲ್ಲಿ ಸಹ ಕಬ್ಬು ಬೆಳೆಗಾರರ ಬಾಕಿ ಹಣ ಉಳಿಸಿಕೊಳ್ಳಲಾಗಿದೆ. ಅಲ್ಲದೆ ಕಬ್ಬಿನಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿದ್ದರೂ ಸಹ ರೈತರನ್ನ ವಂಚಿಸಿ ಕಡಿಮೆ ಸಕ್ಕರೆ ಪ್ರಮಾಣ ನೀಡಿ ಟನ್ ಕಬ್ಬಿಗೆ ಕಡಿಮೆ ಹಣ ನೀಡಲಾಗುತ್ತದೆ. ಕಬ್ಬು ಬೆಳೆಗಾರರಿಗೆ ಪ್ರತಿಟನ್ ಕಬ್ಬಿಗೆ ಜಮೀನಿನಲ್ಲಿ 3500 ರೂಪಾಯಿ ಹಣ ನೀಡಬೇಕು. ಮತ್ತು ಕಬ್ಬು ಕಟಾವ್ ಹಾಗೂ ಸಾಗಾಣಿಕೆ ಖರ್ಚನ್ನು ಸಹ ಕಾರ್ಖಾನೆಗಳು ಭರಿಸುವಂತೆ ಹಾವೇರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಅಶೋಕ ಮರಚರೆಡ್ಡೇರ್ ಒತ್ತಾಯಿಸಿದ್ದಾರೆ.

ಜಿ. ಎಂ ಶುಗರ್ ಕಂಪನಿ ನ್ಯಾಯಯುತ ಬೆಲೆ ನಿಗದಿ ಪಡಿಸದಿದ್ದರೆ ಹಾವೇರಿ ಜಿಲ್ಲೆಯ ಎಲ್ಲ ರೈತ ಸಂಘಟನೆಗಳ ಬೆಂಬಲದಿಂದ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡುವುದಾಗಿ ಅಶೋಕ ಮರಚರೆಡ್ಡೇರ್ ಎಚ್ಚರಿಕೆ ನೀಡಿದ್ದಾರೆ. ಇನ್ನು ಉಳಿದ ಬೆಳೆಗಳ ಕಥೆ ಮುಗಿದಿದೆ. ರಾಜ್ಯದಲ್ಲಿ ಅತಿಹೆಚ್ಚು ಬಿತ್ತನೆ ಕಂಡಿದ್ದ ಹಾವೇರಿ ಜಿಲ್ಲೆಯಲ್ಲಿ ರಾಜ್ಯದಲ್ಲಿ ಅತಿಹೆಚ್ಚು ಬೆಳೆನಾಶ ಪಡಿಸಿದ ಜಿಲ್ಲೆ ಸಹ ಹಾವೇರಿಯಾಗಿದೆ. ಇಲ್ಲಿಯ ರೈತರು ಮುಂಗಾರು ಪೂರ್ವ ಮಳೆ ನಂಬಿ ಬಿತ್ತನೆ ಮಾಡಿದ್ದರು. ಅದು ಬರಲಿಲ್ಲ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಸಹ ಬಿತ್ತನೆ ಮಾಡಿದ ಬೆಳೆಗಳು ಜಮೀನಿನಲ್ಲಿ ಒಣಗಲಾರಂಭಿಸಿದ್ದು, ರೈತರು ಅವುಗಳನ್ನ ಸಹ ನಾಶಪಡಿಸಿದ್ದಾರೆ. ಮೆಕ್ಕೆಜೋಳ, ಶೇಂಗಾ, ಸೋಯಾಬಿನ್, ಹತ್ತಿ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನ ನಾಶಪಡಿಸಿದ್ದಾರೆ. ಇತ್ತ ಸರ್ಕಾರ ಸಹ ತಮ್ಮ ನೆರವಿಗೆ ಬರುತ್ತಿಲ್ಲ ಎಂದು ಹಾವೇರಿ ತಾಲೂಕು ರೈತ ಸಂಘ ಆರೋಪಿಸಿದೆ.

ಹಾವೇರಿ ಜಿಲ್ಲೆಯಲ್ಲಿ ಎಂಟು ತಾಲೂಕುಗಳಿದ್ದು, ಅವುಗಳಲ್ಲಿ ಕೇವಲ ಐದು ತಾಲೂಕುಗಳನ್ನು ಮಾತ್ರ ಬರಗಾಲ ಪೀಡಿತ ಎಂದು ಘೋಷಿಸಲಾಗಿದೆ. ಶಿಗ್ಗಾಂವಿ, ಹಾನಗಲ್ ಮತ್ತು ಬ್ಯಾಡಗಿ ತಾಲೂಕು ಬಿಟ್ಟು ಉಳಿದ ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲಾಗಿದೆ. ಆದರೆ, ಸರ್ಕಾರ ಈ ಕೂಡಲೇ ಹಾವೇರಿ ಜಿಲ್ಲೆಯನ್ನ ಬರಗಾಲ ಪೀಡಿತ ಎಂದು ಘೋಷಣೆ ಮಾಡಬೇಕು. ಜೊತೆಗೆ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಅಲ್ಲದೆ ಪ್ರತಿ ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ಹಾಗೂ ನೀರಾವರಿ ಜಮೀನಿಗೆ ಪ್ರತಿ ಎಕರೆಗೆ 40 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸಿವೆ. ಒಂದೆಡೆ ಬರಗಾಲದಿಂದ ಮಳೆ ನಾಶವಾಗುತ್ತಿದೆ. ಇನ್ನೊಂದೆಡೆ ಬೆಳೆದ ಕಬ್ಬು ಸಹ ಸರಿಯಾದ ಇಳುವರಿ ಬರುತ್ತಿಲ್ಲ. ಬಂದ ಇಳುವರಿಗೆ ಸಹ ಕಾರ್ಖಾನೆಗಳು ಸಮರ್ಪಕ ಬೆಲೆ ನೀಡುತ್ತಿಲ್ಲ. ನಮ್ಮ ಗೋಳು ಕೇಳುವವರು ಯಾರು? ಎಂದು ಪ್ರಶ್ನಿಸುತ್ತಿದ್ದಾರೆ ಹಾವೇರಿ ಜಿಲ್ಲೆಯ ರೈತರು.

ಇದನ್ನೂ ಓದಿ:ಹಾವೇರಿಯಲ್ಲಿ ಮಳೆ ಕೊರತೆ.. ಡ್ರಾಗನ್​ ಫ್ರೂಟ್ಸ್​ ಸೇರಿದಂತೆ ವಿವಿಧ ಬೆಳೆಗಳ ಇಳುವರಿ ಕುಂಠಿತ

ABOUT THE AUTHOR

...view details