ಹಾವೇರಿ :ಸರ್ಕಾರ ಶಾಲೆಗಳ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಹಣ ಬಿಡುಗಡೆ ಮಾಡುತ್ತದೆ. ಆದರೆ, ಹಣ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಉಪಯೋಗವಾಗುವ ಬದಲು ಅಧಿಕಾರಿಗಳ, ಗುತ್ತಿಗೆದಾರರ ಜೇಬು ಸೇರುತ್ತದೆ. ಇಂತಹ ಒಂದು ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ಹಾವೇರಿ ತಾಲೂಕಿನ ಬೆಂಚಿಹಳ್ಳಿ ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕರು, ಸುಧಾರಣಾ ಸಮತಿಯ ಸದಸ್ಯರು ಶಾಲೆಗೆ ಟೇಬಲ್ ಮತ್ತು ಚೇರ್ ಪೂರೈಸುವಂತೆ ಮನವಿ ಸಲ್ಲಿಸಿದ್ದರು. ಅದರಂತೆ ತಾಲೂಕು ಪಂಚಾಯತ್ ಶಾಲೆಗೆ 60 ಸಾವಿರ ರೂಪಾಯಿ ಮೌಲ್ಯದ ವಸ್ತುಗಳು ಬಿಡುಗಡೆಯಾಗಿವೆ ಎಂದಾಗ ಶಾಲೆಯ ಶಿಕ್ಷಕರು, ಸುಧಾರಣಾ ಸಮಿತಿ ಸದಸ್ಯರು ಸಾಕಷ್ಟು ಸಂತಸಪಟ್ಟಿದ್ದರು. ಆದರೆ, ಶಾಲೆಗೆ ಪೀಠೋಪಕರಣದ ಬದಲು ವಿಜ್ಞಾನ ಪರಿಕರಗಳು ಬಂದಿವೆ ಎಂದಾಗ ಇರಲಿ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾದರೆ ಸಾಕು ಎಂದಿದ್ದರು. ಆದರೆ, ಪರಿಕರಗಳ ಬಾಕ್ಸ್ ತೆರೆದಾಗ ಶಿಕ್ಷಕರು ಮತ್ತು ಶಾಲಾ ಸುಧಾರಣಾ ಸಮಿತಿ ಸದಸ್ಯರಿಗೆ ಅಚ್ಚರಿ ಕಾದಿತ್ತು.
ಬಿಡುಗಡೆಯಾಗಿದ್ದು 60 ಸಾವಿರ ರೂಪಾಯಿ. ಆದರೆ, ಶಾಲೆಗೆ ಬಂದಿದ್ದು ನಾಲ್ಕೈದು ಸಾವಿರ ರೂಪಾಯಿ ಮೌಲ್ಯದ ವಸ್ತುಗಳು ಮಾತ್ರ. ಶಾಲೆಯ ಸುಧಾರಣಾ ಸಮಿತಿಯವರು ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ಕರೆ ಮಾಡಿದರೆ ನೀವು ಗುತ್ತಿಗೆದಾರರನ್ನು ಕೇಳಬೇಕು ಅಂತಿದ್ದಾರೆ. ಗುತ್ತಿಗೆದಾರರನ್ನು ಕೇಳಿದರೆ ತಾಲೂಕು ಪಂಚಾಯತ್ ಅಧಿಕಾರಿಗಳನ್ನು ಕೇಳಿ ಅಂತಿದ್ದಾರೆ ಎಂದು ಶಾಲೆಯ ಸುಧಾರಣಾ ಸಮಿತಿಯವರು ಕಿಡಿಕಾರಿದ್ದಾರೆ.