ಸವಣೂರು (ಹಾವೇರಿ):ತಾಯಿಯ ಅಂತ್ಯಕ್ರಿಯೆಗೆಂದು ಬಂದ ಪೊಲೀಸ್ ಕಾನ್ಸ್ಟೇಬಲ್ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಿಡ್ನಿ ಸ್ಟೋನ್ ಆಗಿದೆ ಎಂದು ಆಸ್ಪತ್ರೆಗೆ ತೆರಳಿದ್ದ ಮಹಿಳೆಗೆ ಕೊರೊನಾ ಟೆಸ್ಟ್ ಮಾಡಿಸಿದ್ದು, ಆಕೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಘಟನೆ ಸವಣೂರಿನಲ್ಲಿ ನಡೆದಿದೆ.
ಬೆಂಗಳೂರಿನ ಚಾಮರಾಜಪೇಟೆಯ ಸಿಎಆರ್ ಹೆಡ್ ಕ್ವಾಟ್ರಸ್ನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದ 27 ವರ್ಷದ ಯುವಕನ ತಾಯಿ ಮೃತಪಟ್ಟಿದ್ದರು. ಅಂತ್ಯಕ್ರಿಯೆಗೆಂದು ಅವರು ಊರಿಗೆ ಬಂದಿದ್ದರು. ಈ ವೇಳೆ ಇಲಾಖೆಯ ನಿರ್ದೇಶನದಂತೆ ಕೋವಿಡ್ ಟೆಸ್ಟ್ಗೆ ಗಂಟಲು ದ್ರವದ ಮಾದರಿಯನ್ನು ಲ್ಯಾಬ್ಗೆ ಕೊಟ್ಟಿದ್ದಾರೆ. ಬೆಂಗಳೂರಿನಿಂದ ರಾತ್ರಿ 11ಗಂಟೆಗೆ ಬಸ್ ಹತ್ತಿದ್ದು, ಬೆಳಗ್ಗೆ 6 ಗಂಟೆಗೆ ಹಾವೇರಿ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಬಳಿಕ ಅಲ್ಲಿಂದ ಸವಣೂರಿಗೆ ಬಸ್ ಮೂಲಕ ಹೋಗಿ, ನಂತರ ಬೈಕ್ ಮೂಲಕ ತನ್ನ ಊರು ತಲುಪಿದ್ದಾರೆ. ಅಂತ್ಯಕ್ರಿಯೆ ಮುಗಿದ ಬಳಿಕ ಮನೆಯಲ್ಲೇ ಇದ್ದ ಈತನಿಗೆ ಕೊರೊನಾ ದೃಢಪಟ್ಟಿದೆ ಎಂಬ ವರದಿ ಬಂದಿದೆ. ಸದ್ಯ ಅವರನ್ನು ಸವಣೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾನ್ಸ್ಟೇಬಲ್ ಜೊತೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ 11 ಜನರನ್ನು ಜಿಲ್ಲಾಡಳಿತ ಕ್ವಾರಂಟೈನ್ ಮಾಡಿದೆ.