ಹಾವೇರಿ :ಇವತ್ತಿನ ದಿನ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ದಿವಾಳಿಯಾಗಿದ್ದು, ಮುಂದಿನ ದಿನಗಳಲ್ಲಿ ಹರಾಜಿಗೆ ಬರಲಿದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಶ್ರೀರಾಮುಲು ಅವರು, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಪಕ್ಷವೂ 140 ಕ್ಕೂ ಅಧಿಕ ಸ್ಥಾನಗಳಲ್ಲಿ ಜಯಗಳಿಸಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷ ಬಹಳಷ್ಟು ವರ್ಷಗಳಿಂದ ಜನರಿಗೆ ಟೋಪಿ ಹಾಕುವುದರ ಜೊತೆಗೆ ಜನರ ಕಿವಿಯಲ್ಲಿ ಹೂ ಇಡುತ್ತಾ ಬಂದಿದೆ. ಡೋಂಗಿ ಮಾತುಗಳನ್ನಾಡುವದು ಕಾಂಗ್ರೆಸ್ಸಿಗರಿಗೆ ಅಭ್ಯಾಸವಾಗಿದೆ ಎಂದು ಶ್ರೀರಾಮುಲು ತಿಳಿಸಿದರು.
ದಾವಣಗೆರೆಯಲ್ಲಿ ನಡೆದ ಮಹಾಸಂಗಮ ಕಾರ್ಯಕ್ರಮ ಹಿಂದೆ ಆಗಿರಲಿಲ್ಲಾ ಮುಂದೆ ಆಗುವುದಿಲ್ಲ ಎನ್ನುವಂತಾಗಿದೆ. ಕಾರ್ಯಕ್ರಮ ನೋಡಿದ ರಾಜ್ಯದ ಜನರಲ್ಲಿ ಬಿಜೆಪಿ ಬಗ್ಗೆ ವಿಶ್ವಾಸ ಬಂದಿದೆ. ಇನ್ನೊಂದೆಡೆ ಎಸ್ಸಿ ಎಸ್ಟಿಗೆ ಮೀಸಲಾತಿ ಹೆಚ್ಚಳ ಮಾಡಿದಾಗಿನಿಂದ ಕಾಂಗ್ರೆಸ್ಸಿಗರು ನಿದ್ದೆಗೆಟ್ಟಿದ್ದಾರೆ. ಅವರು ಇಷ್ಟು ದಿನ ಈ ವಿಷಯದಲ್ಲಿ ಮೂಗಿಗೆ ತುಪ್ಪ ಹಚ್ಚುತ್ತಾ ಬಂದಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಏನೇ ಸರ್ಕಸ್ ಮಾಡಿದರು ಗೆಲವು ಬಿಜೆಪಿಯದಾಗುತ್ತೆ. ಇದನ್ನ ಯಾರಿಂದಲೂ ತಪ್ಪಿಸಲಾಗುವುದಿಲ್ಲಾ. ಹಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮುಂದೆ ಮಹಾಮಾರಿ ಹಬ್ಬ ಶುರುವಾಗುತ್ತೆ ಎಂದು ಶ್ರೀರಾಮುಲು ಹೇಳಿದರು.
ಕೆಲವೇ ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಬಹುತೇಕವಾಗಿ ದೇಶದಲ್ಲಿ ಅನೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷ ಬಿಜೆಪಿ. ವಿಶ್ವದಲ್ಲಿ ಅತಿದೊಡ್ಡ ಪಾರ್ಟಿ ಬಿಜೆಪಿ, ನಮ್ಮ ನಾಯಕ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವ ಮೆಚ್ಚುವ ನಾಯಕ ವಿಶ್ವವನ್ನು ಗೆದ್ದ ನಾಯಕರಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷದ ಚುನಾವಣೆ ಸಮೀಕ್ಷೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿರಬಹುದು ಹೊರತು ಬೇರೆ ಸಮೀಕ್ಷೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿಲ್ಲಾ ಎಂದು ಶ್ರೀರಾಮುಲು ತಿಳಿಸಿದರು.