ಹಾವೇರಿ:ಛತ್ರಪತಿ ಶಿವಾಜಿ ಮಹಾರಾಜರು ಭಾರತದ ಚರಿತ್ರೆ ಬದಲಾವಣೆ ಮಾಡಿದ ಯುಗಪುರುಷ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ನಡೆದ ಶಿವಾಜಿ ಮಹಾರಾಜರ 396 ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶಿವಾಜಿ ಮಹಾರಾಜರು ದೇಶದ ಚರಿತ್ರೆ ಬದಲಾಯಿಸಿದ್ದಲ್ಲದೆ ಹೊಸ ಚರಿತ್ರೆಯನ್ನ ರಚನೆ ಮಾಡಿ ಚಾರಿತ್ರ್ಯವಂತ ಸಮಾಜ ನಿರ್ಮಾಣ ಮಾಡಲು ಅವರು ಮಾಡಿರುವ ಕೆಲಸಗಳು ಮಾದರಿಯಾಗಿವೆ ಎಂದು ಸಿಎಂ ತಿಳಿಸಿದರು.
ಶಿವಾಜಿ ಮಹಾರಾಜರಿಗೆ ಕೊಂಡೋಜಿ ಎಂಬ ಗುರು ಶಸ್ತ್ರ ವಿದ್ಯೆ ಕಲಿಸಿದ್ದರು. ಶಿವಾಜಿ ಮಹಾರಾಜರು ಶಸ್ತ್ರವಿದ್ಯೆ ಮತ್ತು ಶಾಸ್ತ್ರ ವಿದ್ಯೆಯನ್ನು ಬೇಗನೆ ಕಲಿತರು. ಅವರ ಎದೆಯಲ್ಲಿ ಧೈರ್ಯ, ಸ್ಥೈರ್ಯ ಮತ್ತು ಆತ್ಮಬಲ ಜೋಡಿಸಿ ಶಿವಾಜಿ ಮಹಾರಾಜರು ಗೆರಿಲ್ಲಾ ಯುದ್ಧ ಕಲೆಯಿಂದ ಬೇರೆ ಬೇರೆ ಪ್ರಾಂತ್ಯಗಳನ್ನ ವಶಪಡಿಸಿಕೊಂಡು ಹಿಂದೂ ಸಮಾಜಕ್ಕೆ ಆಡಳಿತಗಾರರ ಮೇಲೆ ಬಂದ ಸಂಚನ್ನು ಧೈರ್ಯವಾಗಿ ಎದುರಿಸಿದ್ದರು. ಇದರಿಂದಾಗಿ ಅತಿಕ್ರಮಣ ಮತ್ತು ಆಕ್ರಮಣ ಎರಡನ್ನು ಸಮರ್ಥವಾಗಿ ನಿಭಾಯಿಸಿದರು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಶಿವಾಜಿ ಪರಾಕ್ರಮದ ಕುರಿತು ಬಣ್ಣಿಸಿದರು.
ಶಿವಾಜಿ ಮಹಾರಾಜರು ಒಬ್ಬ ಸಾಧಕರು. ಸದಾ ನಮಗೆ ಪ್ರೇರಣೆ ನೀಡುವಂತಹ ಶಕ್ತಿ. ಬದುಕಿದ್ದಾಗ ಕೆಲವರು ಬಹಳ ಜನಪ್ರಿಯರಾಗಿರುತ್ತಾರೆ. ಬದುಕಿನ ನಂತರವೂ ಅಷ್ಟೇ ಪ್ರಬಲ ಜನಪ್ರಿಯತೆ ಹೊಂದಿದವರು ವಿರಳ. ಇವರೆಲ್ಲಾ ಯುಗಪುರುಷರು. ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ ಮತ್ತು ಸುಭಾಶ್ ಚಂದ್ರ ಬೋಸ್ ಸಹ ಯುಗಪುರುಷರು ಎಂದು ಸಿಎಂ ತಿಳಿಸಿದರು.
ಇದನ್ನೂ ಓದಿ :ಚಿಕ್ಕಮಗಳೂರು ಜನ ಭಾವನಾತ್ಮಕ ವಿಚಾರ ಬಿಟ್ಟು, ಜೀವನದ ಬಗ್ಗೆ ಯೋಚಿಸುತ್ತಿದ್ದಾರೆ: ಡಿ ಕೆ ಶಿವಕುಮಾರ್
ಇವರಿಗಿಂತ ಪೂರ್ವದಲ್ಲಿ ಭಾರತ ದೇಶದ ಸ್ವಾಭಿಮಾನಿ ಇಡೀ ಭಾರತದ ಸ್ವಾತಂತ್ರ್ಯ ಸಂಕಷ್ಟದಲ್ಲಿದ್ದಾಗ ಭಾರತವನ್ನು ಗುಲಾಮಗಿರಿಗೆ ಒಡ್ಡುವ ಸಮಯದಲ್ಲಿ ಅದಕ್ಕೆ ಪ್ರಬಲವಾದ ತಡೆಯೊಡ್ಡಿ, ಭಾರತದ ಧರ್ಮ, ಸಂಸ್ಕೃತಿ, ಪರಂಪರೆ ಇವೆಲ್ಲವನ್ನ ಕೂಡ ಉಳಿಸಿ ಮರುಸ್ಥಾಪನೆ ಮಾಡಿರುವ ಧೀಮಂತರಿದ್ದರೆ ಅದು ಛತ್ರಪತಿ ಶಿವಾಜಿ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.