ಹಾವೇರಿ: ಹಾವೇರಿ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಟಿಕೆಟ್ ಕೈತಪ್ಪಿದ್ದರಿಂದ ತೀವ್ರ ಅಸಮಾಧಾನಗೊಂಡಿರುವ ನೆಹರು ಓಲೇಕಾರ್ ಅವರು ಇಂದು ಕೇಸರಿ ಪಕ್ಷ ತೊರೆಯಲಿದ್ದಾರೆ. ಈ ಕುರಿತಂತೆ ಶನಿವಾರ ತಡರಾತ್ರಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಇಂದು ಶಿರಸಿಗೆ ತೆರಳಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಪತ್ರ ನೀಡುತ್ತೇನೆ. ಅಲ್ಲಿಂದ ಬೆಂಗಳೂರಿಗೆ ತೆರಳಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಸಹ ರಾಜೀನಾಮೆ ನೀಡುತ್ತೇನೆ ಎಂದರು.
ಶನಿವಾರ ನಡೆದ ಬೆಂಬಲಿಗರ ಸಭೆಯಲ್ಲಿ ಈ ತಿರ್ಮಾನಕ್ಕೆ ಬರಲಾಗಿದೆ. ಸಂಜೆ ಜೆಡಿಎಸ್ ಪಕ್ಷದ ಕಚೇರಿಗೆ ತೆರಳಿ ಜೆಡಿಎಸ್ ಪಕ್ಷ ಸೇರುತ್ತೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ನಾನು ಉದ್ದೇಶ ಪೂರ್ವಕವಾಗಿ ಮಾತನಾಡಿಲ್ಲ. ನನ್ನ ಟಿಕೆಟ್ ತಪ್ಪಿಸಲು ಅನೇಕ ಜನ ನನ್ನ ಬಗ್ಗೆ ಮಾತನಾಡಿದ್ದಾರೆ. ಅದೆಲ್ಲವನ್ನು ತಿಳಿದುಕೊಂಡು ನಾನು ಮಾತನಾಡಿದ್ದೇನೆ ಎಂದು ತಿಳಿಸಿದರು. ಹಾವೇರಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಅನ್ನು ನೆಹರು ಓಲೇಕಾರ್ ಬದಲಿಗೆ ಗವಿಸಿದ್ದಪ್ಪ ದ್ಯಾಮಣ್ಣನವರ್ ಅವರಿಗೆ ನೀಡಲಾಗಿದೆ.
ಸಿಎಂ ವಿರುದ್ಧ ಬಳಸಿದ ಪದಕ್ಕೆ ಓಲೇಕಾರ್ ವಿಷಾದ.. ಇನ್ನು ಶನಿವಾರ ಬೆಂಬಲಿಗರ ಸಭೆಯಲ್ಲಿ ಆಡಿದ ಮಾತುಗಳ ಕುರಿತಂತೆ ವಿಡಿಯೋವೊಂದನ್ನು ಶೇರ್ ಮಾಡಿರುವ ನೆಹರು ಓಲೇಕಾರ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಆವೇಷಭರಿತನಾಗಿ ಮಾತನಾಡಿದ್ದೇನೆ. ಇದರಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ. ಜೊತೆಗೆ, ಸಿಎಂ ಬಸವರಾಜ ಬೊಮ್ಮಾಯಿ ಬಗ್ಗೆ ಕೆಲವೊಂದು ಶಬ್ಧ ಉಪಯೋಗಿಸಿದ್ದರ ಬಗ್ಗೆ ಸಹ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಎಲ್ಲಾ ಸಮುದಾಯದ ಬಗ್ಗೆ ನನಗೆ ಅಪಾರವಾದ ಕಾಳಜಿ ಮತ್ತು ಗೌರವ ಇದೆ. ಯಾವುದೇ ಒಂದು ಸಮುದಾಯದ ಜನರ ಮನಸ್ಸಿಗೆ ನೋವು ಉಂಟು ಮಾಡುವ ಉದ್ದೇಶ ಹೊಂದಿರಲಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ :ನಾನೂ ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ : ಶಾಸಕ ನೆಹರು ಓಲೇಕಾರ್