ರಾಣೆಬೆನ್ನೂರು:ನೆರೆಯಿಂದ ಬೆಳೆ ಮತ್ತು ಮನೆ ಕಳೆದುಕೊಂಡ ಸಂತ್ರಸ್ತರಿಗೆ ಶೀಘ್ರದಲ್ಲೇ ಪರಿಹಾರ ನೀಡಲಾಗುತ್ತದೆ ಎಂದು ಹಾವೇರಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ್ ತಿಳಿಸಿದ್ದಾರೆ.
ನೆರೆ ಸಂತ್ರಸ್ತರಿಗೆ ಆದಷ್ಟು ಬೇಗ ಪರಿಹಾರ: ಹಾವೇರಿ ಅಪರ ಜಿಲ್ಲಾಧಿಕಾರಿ
ರಾಣೆಬೆನ್ನೂರು ತಾಲೂಕಿನಲ್ಲಿ ನೆರೆಯಿಂದ ಬೆಳೆ ಮತ್ತು ಮನೆ ಕಳೆದುಕೊಂಡ ಸಂತ್ರಸ್ತರಿಗೆ ಶೀಘ್ರದಲ್ಲೇ ಪರಿಹಾರ ನೀಡಲಾಗುತ್ತದೆ ಎಂದು ಹಾವೇರಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ್ ತಿಳಿಸಿದ್ದಾರೆ.
ನಗರದ ಮಿನಿ ವಿಧಾನಸೌಧದಲ್ಲಿ ರೈತರು, ನಿರಾಶ್ರಿತರ ಕುಂದುಕೊರತೆ ಹಾಗೂ ಪರಿಹಾರ ಮಾರ್ಗಗಳನ್ನು ಅವಲೋಕಿಸಿ ಮಾತನಾಡಿದ ಅವರು, ತಾಲೂಕಿನ ಕೆಲ ರೈತರಿಗೆ ಇನ್ನೂ ನೆರೆ ಪರಿಹಾರ ದೊರೆತಿಲ್ಲ. ಜಿಲ್ಲೆಯ ಸುಮಾರು ಏಳು ತಾಲೂಕುಗಳಲ್ಲಿ ಶೇ. 90ರಷ್ಟು ಪರಿಹಾರ ಕಾರ್ಯ ಮುಗಿದಿದೆ. ಇನ್ನುಳಿದ ಪರಿಹಾರ ನೀಡುವ ಕಾರ್ಯದಲ್ಲಿ ಅಧಿಕಾರಿಗಳು ತೊಡಗಿದ್ದಾರೆ. ಆ ಪರಿಹಾರ ಹಣವನ್ನು ಶೀಘ್ರದಲ್ಲೇ ನೀಡಲಾಗುತ್ತದೆ ಎಂದು ರೈತರಿಗೆ ಭರವಸೆ ನೀಡಿದರು.
ಒಬ್ಬ ರೈತ 4 ಎಕರೆ ಜಮೀನು ಹೊಂದಿ ಅದರಲ್ಲಿ ಹಾನಿಯಾದ 2 ಎಕರೆ ಜಮೀನನ್ನು ಜಿಪಿಎಸ್ ಮಾಡಲಾಗಿದೆ. ಆದರೆ ರೈತರು 4 ಎಕರೆ ಹಾನಿ ಹಣ ಕೇಳುತ್ತಿರುವುದು ತಪ್ಪಲ್ಲ. ಆದರೆ ಹಾನಿಯನ್ನು ಸರ್ಕಾರದ ಅಧಿಕಾರಿಗಳು ನಿಗದಿ ಮಾಡುತ್ತಾರೆ ಎಂದರು. ಜಿಲ್ಲೆಯಲ್ಲಿ ಪರಿಹಾರ ವಿತರಣೆಯಲ್ಲಿ ಅಕ್ರಮ ನಡೆದಿರುವುದು ಕಂಡುಬಂದಿದೆ. ಈಗಾಗಲೇ ಉಪ ವಿಭಾಗಾಧಿಕಾರಿಗಳು ಅಕ್ರಮವಾಗಿ ಪರಿಹಾರ ತಗೆದುಕೊಂಡವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ತಾಲೂಕಿನಲ್ಲಿ ಇಂತಹ ಪ್ರಕರಣ ಕಂಡುಬಂದರೆ ತನಿಖೆ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.