ಹಾವೇರಿ :ರಾಜ್ಯ ಹೆದ್ದಾರಿಯಲ್ಲಿ ದರೋಡೆ ನಡೆದ ಎಂಟು ಗಂಟೆಗಳಲ್ಲೇ ಆರೋಪಿಗಳನ್ನು ಹಾವೇರಿ ಜಿಲ್ಲೆ ಹಾನಗಲ್ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ನ.15 ರಂದು ಹಾನಗಲ್ ಸಮೀಪದ ಗೆಜ್ಜಿಹಳ್ಳಿ ಬಳಿ 5 ದರೋಡೆಕೋರರು ವಾಹನವನ್ನು ಅಡ್ಡಗಟ್ಟಿ ಕೊಲೆ ಮಾಡುವುದಾಗಿ ಹೆದರಿಸಿ ಸೂಲಿಗೆ ಮಾಡಿದ್ದರು.
ಬಂಧಿತರಿಂದ 1 ಲಕ್ಷ ನಗದು, ಮೊಬೈಲ್ ಹಾಗೂ ಮೋಟಾರು ಸೈಕಲ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಪ್ರವೀಣ ಸಾತಪತಿ (31), ರಾಕೇಶ ಬಾರ್ಕಿ (22), ಜಗದೀಶ್ (21), ಅಣ್ಣಪ್ಪ (22), ಗಣೇಶ (21) ಎಂದು ಗುರುತಿಸಲಾಗಿದೆ. ಇರ್ಷಾದ್ ಮತ್ತು ಗೌಸ್ ಮೊಹಿನುದ್ದಿನ್ ಎಂಬುವವರು ತರಕಾರಿ ವ್ಯಾಪಾರಸ್ಥರಾಗಿದ್ದು, ಇವರಿಬ್ಬರಿಂದ ನಗದು ಹಾಗೂ ಮೊಬೈಲ್ ಕಸಿದುಕೊಂಡು ಖದೀಮರು ಪರಾರಿಯಾಗಿದ್ದರು.
ಎಂಟೇ ತಾಸಲ್ಲಿ ಖದೀಮರು ಅಂದರ್: ಇನ್ನು ಕೃತ್ಯ ನಡೆದ 8 ಗಂಟೆಗಳಲ್ಲೇ ಮಿಂಚಿನ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಭೇದಿಸಿರುವ ಹಾನಗಲ್ ಪೊಲೀಸರ ಈ ಕರ್ತವ್ಯಕ್ಕೆ ನೂತನ ಎಸ್ಪಿ ಅಂಶುಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಪ್ರಕರಣ- ರಾಬರಿ ಯತ್ನ ವಿಫಲ : ಇತ್ತೀಚೆಗೆ ಬೆಂಗಳೂರಿನ ಪುಲಿಕೇಶಿ ನಗರ ವ್ಯಾಪ್ತಿಯಲ್ಲಿ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹೊರಟವನನ್ನು ದೋಚಲು ಮುಂದಾಗಿದ್ದ ಕಿಡಿಗೇಡಿಗಳು, ಏಕಾಏಕಿ ಆತನ ಮೇಲೆರಗಿ ಹಲ್ಲೆ ಮಾಡಿದ್ದ ಘಟನೆ ವರದಿಯಾಗಿತ್ತು. ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅಸ್ಸೋಂ ಮೂಲದ ಮನೋಜ್ ಎಂಬಾತ ರಾತ್ರಿ ಮನೆಗೆ ಹೊರಟಿದ್ದನು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಕಿಡಿಗೇಡಿಗಳು ಮಾರಕಾಸ್ತ್ರದಿಂದ ಆತನ ಮೇಲೆ ಹಲ್ಲೆ ಮಾಡಿದ್ದರು. ಈ ಕೃತ್ಯದ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದವು. ಈ ಕುರಿತು ಪುಲಿಕೇಶಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಹಿಳೆ ಮೇಲೆ ಹಲ್ಲೆ, ದರೋಡೆಗೆ ಯತ್ನ :ಮತ್ತೊಂದೆಡೆ ಮಡಿಕೇರಿಯ ಕಾಲೇಜು ರಸ್ತೆಯ ಐಡಿಬಿಐ ಬ್ಯಾಂಕ್ ಎದುರಿನಲ್ಲಿರುವ ನಿವೃತ್ತ ಪೊಲೀಸ್ ಅಧಿಕಾರಿ ಎಂ ಸಿ ಪ್ರಭಾಕರ್ ಎಂಬವರಿಗೆ ಸೇರಿದ ಮನೆಯಲ್ಲಿ ದರೋಡೆ ಯತ್ನ ನಡೆದಿತ್ತು. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಪ್ರಭಾಕರ್ ಅವರ ಹೆಂಡತಿ ಮೇಲೆ ಹಲ್ಲೆ ಮಾಡಿ ಕೊರಳಲ್ಲಿದ್ದ 27 ಗ್ರಾಂ ಚಿನ್ನದ ಸರ ಕಸಿದುಕೊಂಡು ಆರೋಪಿ ಪರಾರಿಯಾಗಿದ್ದನು. ಬಳಿಕ ಪೊಲೀಸರು ಕೃತ್ಯ ನಡೆದ 12 ಗಂಟೆಯೊಳಗೆ ರಾಜಸ್ಥಾನ ಮೂಲದ ವಿಕಾಸ್ (33) ಎಂಬ ಆರೋಪಿಯನ್ನು ಬಂಧಿಸಿದ್ದರು.
ಇದನ್ನೂ ಓದಿ :ಸೊಂಟದ ಬೆಲ್ಟ್ ಪೌಚ್ನಲ್ಲಿ ಮರೆಮಾಚಿ ಚಿನ್ನ ಸಾಗಣೆ: ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪ್ರಯಾಣಿಕರು