ಅರಸೀಕೆರೆ (ಹಾಸನ):ರಾಜ್ಯದಲ್ಲಿ ಇತ್ತೀಚಿನ ದಿನಗಳಳಲ್ಲಿ ಕಾಡು ಪ್ರಾಣಿಗಳು ಆಹಾರವನ್ನರಸಿ ನಾಡಿಗೆ ಬರುವ ಪ್ರಕರಣಗಳು ಹೆಚ್ಚುತ್ತಿವೆ. ಹುಲಿ ಹಾಗೂ ಚಿರತೆ ನಾಡಿಗೆ ನುಗ್ಗುವ ಪ್ರಮಾಣ ಅಧಿಕವೆಂದೇ ಹೇಳಬಹುದು. ಅದೇ ರೀತಿ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಬಾಗಿವಾಳು ಗ್ರಾಮದಲ್ಲಿ ಚಿರತೆಯೊಂದು ಯುವಕನ ಮೇಲೆ ದಾಳಿ ಮಾಡಿದೆ. ಜೀವ ಉಳಿಸಿಕೊಳ್ಳುವ ಉದ್ದೇಶದಿಂದ ಧೈರ್ಯ ಮಾಡಿದ ಯುವಕನೋರ್ವ ತನ್ನ ಮೇಲೆ ದಾಳಿ ಮಾಡಿದ ಚಿರತೆಯನ್ನು ಜೀವಂತವಾಗಿ ಹಿಡಿದು ಬೈಕ್‌ಗೆ ಕಟ್ಟಿ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ ಘಟನೆ ನಡೆದಿದೆ. ಬಾಗಿವಾಳು ಗ್ರಾಮದ ಮುತ್ತು ಈ ಸಾಹಸ ಮೆರೆದಿರುವ ಯುವಕ.
ಘಟನೆಯ ಸಂಪೂರ್ಣ ವಿವರ: ದಾಳಿ ಮಾಡಲು ಬಂದ ಚಿರತೆ ಜತೆ ಹೋರಾಡಿದ ಯುವಕ ಗ್ರಾಮಸ್ಥರ ಸಹಾಯದಿಂದ ಚಿರತೆ ಕಾಲುಗಳನ್ನು ಕಟ್ಟಿ ತನ್ನ ದ್ವಿಚಕ್ರ ವಾಹನದಲ್ಲಿ ತಂದು ಅರಣ್ಯ ಇಲಾಖೆಗೆ ಒಪ್ಪಿಸಿ ಸಾಹಸ ಮೆರೆದಿದ್ದಾನೆ. ಜು. 14ರಂದು ತನ್ನ ಜಮೀನಿನಲ್ಲಿ ಬೆಳೆದಿದ್ದ ಶುಂಠಿಗೆ ಔಷಧಿ ಸಿಂಪಡಿಸಲು ಹೋದ ಸಂದರ್ಭದಲ್ಲಿ ಊರಿನ ಕೆಲವು ವ್ಯಕ್ತಿಗಳು ಚಿರತೆ ಬಂದಿದೆ ಎಂದು ತಿಳಿಸಿದರು. ಮುತ್ತು ಮುಂದೆ ಸಾಗುವಾಗ ಮರದ ಮೇಲೆ ಕುಳಿತಿದ್ದ ಚಿರತೆ ಆತನ ಮೇಲೆ ದಾಳಿ ಮಾಡಿದೆ. ಈ ಸಂದರ್ಭದಲ್ಲಿ ಚಿರತೆಯ ಜತೆ ಹೋರಾಟ ಮಾಡಿ ಚಿರತೆಯ ಕಾಲುಗಳನ್ನು ಕಟ್ಟಿ ತನ್ನ ಜಮೀನಿನಿಂದ ಬಾಗಿವಾಳ ಗ್ರಾಮಕ್ಕೆ ಬೈಕ್ನಲ್ಲಿ ತಂದಿದ್ದಾನೆ. ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ.
ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಗಾಯಗೊಂಡಿದ್ದ ಚಿರತೆಗೆ ಚಿಕಿತ್ಸೆ ನೀಡಿ ವಶಕ್ಕೆ ಪಡೆದಿದ್ದಾರೆ. ನಂತರ ಗಾಯಾಳು ಮುತ್ತುುಗೆ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸದ್ಯ ಯುವಕ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂದರ್ಭದಲ್ಲಿ ಅರಣ್ಯ ಅಧಿಕಾರಿ ಹೇಮಂತ್ ಕುಮಾರ್, ಉಪ ಅರಣ್ಯ ಅಧಿಕಾರಿ ರಮೇಶ್ ಜಿ. ಹೆಚ್, ಅರಣ್ಯ ರಕ್ಷಕ ಅರುಣ್ ಕುಮಾರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತದರು.