ಕರ್ನಾಟಕ

karnataka

ETV Bharat / state

ಪ್ರೀತಂಗೌಡಗೆ ಒಲಿಯುವುದೇ ಸಚಿವ ಸ್ಥಾನ.. ಹಾಸನ ಕೇಸರಿ ಪಾಳಯದ ಹೊಸ ಲೆಕ್ಕಾಚಾರ.. - ರಾಜ್ಯದಲ್ಲಿ ಬಿ ಎಸ್​ ಯಡಿಯೂರಪ್ಪ 4ನೇ ಬಾರಿಗೆ ಸಿಎಂ

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಹಾಸನ ಜಿಲ್ಲೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಹೊಸ ಹುರುಪು ಕಾಣಿಸಿಕೊಂಡಿದೆ. ಈ ನಡುವೆ ಜಿಲ್ಲೆಯ ಬಿಜೆಪಿ ಶಾಸಕ ಪ್ರೀತಂಗೌಡಗೆ ಸಚಿವ ಸ್ಥಾನ ಸಿಗಬಹುದೇ ಎನ್ನುವ ಲೆಕ್ಕಾಚಾರ ಕೂಡಾ ಶುರುವಾಗಿದೆ.

ಹಾಸನ ಕೇಸರಿ ಪಾಳಯದಲ್ಲಿ ಶುರುವಾಯಿತು ಅಧಿಕಾರದ ಲೆಕ್ಕಾಚಾರ

By

Published : Jul 29, 2019, 6:56 AM IST

Updated : Jul 29, 2019, 11:57 AM IST

ಹಾಸನ:ಅಂತೂ ಇಂತೂ ರಾಜ್ಯದಲ್ಲಿ ಬಿ ಎಸ್​ ಯಡಿಯೂರಪ್ಪ 4ನೇ ಬಾರಿಗೆ ಸಿಎಂ ಪಟ್ಟಕ್ಕೇರಿದ್ದಾರೆ. ಅಧಿಕಾರ ಸ್ವೀಕರಿಸುತ್ತಿದ್ದಂತೆ ಜಿಲ್ಲೆಯಲ್ಲಿ ಅಧಿಕಾರ ಲೆಕ್ಕಾಚಾರ ಆರಂಭಗೊಂಡಿದ್ದು, ಬಿಜೆಪಿಯ ಏಕೈಕ ಶಾಸಕ ಪ್ರೀತಂಗೌಡಗೆ ಸಚಿವ ಸ್ಥಾನ ಸಿಗಲಿದೆಯೇ ಎನ್ನುವ ಚರ್ಚೆ ಜೋರಾಗಿದೆ.

2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಗದ್ದುಗೆಗೇರಿದ್ದಾಗ ಜಿಲ್ಲೆಯಲ್ಲಿ ಒಬ್ಬರೂ ಕಮಲ ಶಾಸಕರಿರಲಿಲ್ಲ. ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಜೆಡಿಎಸ್‌, ಎರಡರಲ್ಲಿ ಕಾಂಗ್ರೆಸ್‌ ಶಾಸಕರಿದ್ದರು. ಆಗ ಯಾರಿಗೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಅರವಿಂದ ಲಿಂಬಾವಳಿ, ವಿ. ಸೋಮಣ್ಣ, ರೇಣುಕಾಚಾರ್ಯ ಅವರು ಕೆಲ ತಿಂಗಳು ಕಾರ್ಯ ನಿರ್ವಹಿಸಿದ್ರು.

ಬಲ ಕಳೆದುಕೊಂಡಿದ್ದ ಬಿಜೆಪಿ, ಉತ್ತಮ ಸಂಘಟನೆ ಮೂಲಕ 2018ರಲ್ಲಿ ನಡೆದ ಹಾಸನ ಮತ್ತು ಸಕಲೇಶಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಬಲಪಡಿಸುವಲ್ಲಿ ಮುಂಚೂಣಿಯ ಪಾತ್ರವಹಿಸಿ, ಹಾಸನ ಕ್ಷೇತ್ರವನ್ನು ತನ್ನ ಮಡಿಲಿಗೆ ಹಾಕಿಕೊಂಡಿತ್ತು. ಸಕಲೇಶಪುರ ಕ್ಷೇತ್ರವನ್ನು ಅಲ್ಪ ಮತಗಳ ಅಂತರದಿಂದ ಕಳೆದುಕೊಂಡು ಜಿಲ್ಲಾ ಕೇಂದ್ರ ಹಾಸನದಲ್ಲಿ ತನ್ನ ಪ್ರಾಬಲ್ಯ ಸ್ಥಾಪಿಸಿ, ಉಳಿದ ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಅಲ್ಪ ಮಟ್ಟಿನ ಪ್ರತಿರೋಧ ಒಡ್ಡುವಲ್ಲಿ ಯಶಸ್ವಿಯಾಗಿತ್ತು.

ಪ್ರೀತಂಗೌಡಗೆ ಒಲಿಯುವುದೇ ಸಚಿವ ಸ್ಥಾನ..

2014ರ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕೊಂಚ ಚೇತರಿಕೆ ಕಂಡಿತ್ತು. ಈ ಬಾರಿ ಹಾಸನ ಕ್ಷೇತ್ರದಿಂದ ಆಯ್ಕೆಯಾಗಿರುವ ಜಿಲ್ಲೆಯ ಏಕೈಕ ಶಾಸಕ ಪ್ರೀತಂಗೌಡಗೆ ಜಿಲ್ಲಾವಾರು ಪ್ರಾತಿನಿಧ್ಯ ಪರಿಗಣಿಸಿದರೆ, ಸಚಿವ ಸ್ಥಾನ ಸಿಗಬಹುದು ಎಂಬ ಆಶಾಭಾವ ಮೂಡಿದೆ. ಇವರು ಬಿಎಸ್​ವೈ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಪ್ಲಸ್​ ಪಾಯಿಂಟ್​. ಆದರೆ, ಸಿ ಟಿ ರವಿ, ಪ್ರೀತಂ ಬೆನ್ನಿಗೆ ನಿಂತರೆ ಸಚಿವ ಸ್ಥಾನ ಸಿಗುವುದರಲ್ಲಿ ಎರಡು ಮಾತಿಲ್ಲ ಎನ್ನಲಾಗ್ತಿದೆ.

ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಕುಟುಂಬವನ್ನು ನೇರವಾಗಿ ಟಾರ್ಗೆಟ್ ಮಾಡಿದ್ದ ಪ್ರೀತಂಗೌಡ, ಬ್ರಿಟೀಷರು ಇನ್ನೂರು ವರ್ಷಗಳ ಕಾಲ ದೇಶವನ್ನು ಕೊಳ್ಳೆ ಹೊಡೆದರು. ಅಂತೆಯೇ ದೇವೇಗೌಡರ ಕುಟುಂಬ ಈಗಾಗಲೇ 60 ವರ್ಷಗಳ ರಾಜಕೀಯ ಜೀವನವನ್ನ ಪೂರೈಸಿದ್ದು, ಮೊಮ್ಮಗನಿಗೆ ಕ್ಷೇತ್ರವನ್ನು ತ್ಯಾಗ ಮಾಡಿದ್ದಾರೆ. ಬ್ರಿಟೀಷರ ಸಹೋದರರಿವರು ಅಂತಾ ಲೇವಡಿ ಮಾಡಿ, ದೊಡ್ಡಗೌಡರ ಕುಟುಂಬವನ್ನು ಟಾರ್ಗೆಟ್ ಮಾಡಿದ್ದರು.

ಇನ್ನೊಂದೆಡೆ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಪರಾಜಿತಗೊಂಡಿದ್ದ, ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ ತ್ಯಜಿಸಿ ಹಾಸನ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಸಚಿವ ಎ. ಮಂಜು, ಎಂಎಲ್‌ಸಿಗೆ ಬೇಡಿಕೆ ಇಟ್ಟಿದ್ದಾರೆಂಬ ಮಾತುಗಳು ಹರಿದಾಡುತ್ತಿವೆ. ಬಿಜೆಪಿಗೆ ಹಾರಿದ್ದ ಎ. ಮಂಜು 5 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಜಿಲ್ಲೆಯ ಇತಿಹಾಸದಲ್ಲೇ ಹೆಚ್ಚು ಮತಗಳು ಬಿಜೆಪಿಗೆ ಬರುವುದಕ್ಕೆ ತನ್ನ ವೈಯಕ್ತಿಕ ವರ್ಚಸ್ಸು ಕಾರಣ ಎಂದು ಹೇಳಿಕೊಂಡಿದ್ದರು. ಹಾಗಾಗಿ ವಿಧಾನ ಪರಿಷತ್‌ ಸದಸ್ಯರಾಗಿ ಮಾಡುವ ಮೂಲಕ ಸಚಿವ ಸ್ಥಾನ ನೀಡುವಂತೆ ವರಿಷ್ಠರಲ್ಲಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗ್ತಿದೆ.

ಇತ್ತ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವೆ. ಆದರೆ, ಸಚಿವ ಸ್ಥಾನ ನೀಡುವಂತೆ ಯಾವುದೇ ಒತ್ತಡ ಹೇರುವುದಿಲ್ಲ ಎಂಬುದು ಪ್ರೀತಂ ಗೌಡರ ಮಾತಾಗಿದೆ. ಆದರೆ, ಶಾಸಕ ಪ್ರೀತಂ ಗೌಡ ಸದ್ಯ ಕ್ಷೇತ್ರ ಬಿಟ್ಟು ರಾಜಧಾನಿಯಲ್ಲಿಯೇ ಬೀಡುಬಿಟ್ಟಿದ್ದು, ಕೆಲ ಹಿರಿಯ ರಾಜಕಾರಣಿಗಳ ನಡುವೆ ಸುತ್ತಾಡುತ್ತಿದ್ದಾರೆ ಎಂಬುದು ಗುಟ್ಟಾಗಿ ಉಳಿದಿರುವ ವಿಚಾರವೇನಲ್ಲ.

ಇಂದು ವಿಶ್ವಾಸ ಮತಯಾಚನೆ ಮಾಡಲಿರುವ ಬಿ ಎಸ್ ಯಡಿಯೂರಪ್ಪ ಬಳಿಕ ತಮ್ಮ ಸಂಪುಟಕ್ಕೆ ಯಾವ ಯಾವ ನಾಯಕರುಗಳನ್ನು ಸೇರಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Last Updated : Jul 29, 2019, 11:57 AM IST

ABOUT THE AUTHOR

...view details