ಹಾಸನ:ಮಲೆನಾಡು, ಅರೆಮಲೆನಾಡು ಮತ್ತು ಬಯಲುಸೀಮೆಗಳನ್ನು ಹೊಂದಿರುವ ಅರಸೀಕೆರೆ ತಾಲೂಕು ಬಯಲುಸೀಮೆ ಪ್ರದೇಶವಾಗಿದ್ದು, ಫ್ಲೋರೈಡ್ ಅಂಶವುಳ್ಳ ನೀರನ್ನು ಸೇವಿಸುತ್ತಿರುವುದು ಇಲ್ಲಿನ ಜನತೆ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಹಾಗಾಗಿ ಹಾಸನದ ಜಿಲ್ಲಾಧಿಕಾರಿ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದು, ಇವುಗಳತ್ತ ಗಮನ ಹರಿಸಬೇಕಿದೆ.
ರೋಗಿಗಳ ಪರದಾಟ:
2009ರಲ್ಲಿ ಅರಸೀಕೆರೆ ಮತ್ತು ಹುಳಿಯರ್ ನಡುವೆ ಬರುವ ಜಯಚಾಮರಾಜಪುರ ಗ್ರಾಮಲ್ಲಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣವೇನೋ ಆಯಿತು. ಆದರೆ, ಅಂದಿನಿಂದ ಇಲ್ಲಿಯವರೆಗೆ ತುರ್ತು ವಾಹನಗಳಿಲ್ಲದ ಪರಿಣಾಮ ರೋಗಿಗಳು ಪರದಾಡುವಂತಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಜಯಚಾಮರಾಜಪುರ ಗ್ರಾಮಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಇನ್ನು ಆಸ್ಪತ್ರೆಗೆ ನಾಲ್ಕು ಜನ ವೈದ್ಯರು ಮತ್ತು ಇತರೆ ಇಬ್ಬರು ಸಿಬ್ಬಂದಿಯ ಅವಶ್ಯಕತೆಯಿದ್ದು, ಇದುವರಿಗೂ ಕೂಡ ನೇಮಕಾತಿ ಮಾಡುವ ಪ್ರಕ್ರಿಯೆಗೆ ಸರ್ಕಾರ ಮುಂದಾಗಿಲ್ಲ. ಬರುವ ವೈದ್ಯರಿಗೆ ಸರಿಯಾದ ಕ್ವಾಟ್ರಸ್ ಇಲ್ಲದ್ದರಿಂದ ಈ ಗ್ರಾಮದಲ್ಲಿ ಉಳಿಯಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ.
ಈಗಿರುವ ವೈದ್ಯರ ವಸತಿ ಗೃಹಗಳು ಕೂಡ ಬಿದ್ದುಹೋಗುವ ಹಂತದಲ್ಲಿದ್ದು, ಈ ನಡುವೆಯೇ ಕೆಲ ವೈದ್ಯರು ಅಲ್ಲಿಯೇ ಜೀವನ ದೂಡುತ್ತಿದ್ದಾರೆ. ಆರೋಗ್ಯ ಮಂತ್ರಿಯಾಗಿದ್ದ ಹಾಲಿ ಸ್ಪೀಕರ್ ರಮೇಶ್ ಕುಮಾರ್ ಅವರು ಖುದ್ದು ಈ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ನೇಮಕಾತಿ ಮತ್ತು ವಾಹನ ನೀಡುವ ಭರವಸೆ ನೀಡಿದರು. ಆದರೆ, ಈಗ ಅದು ಭರವಸೆಯಾಗಿಯೇ ಉಳಿದಿದೆ ಎನ್ನುತ್ತಾರೆ ಸ್ಥಳೀಯರು.
ಶತಮಾನೋತ್ಸವ ಆಚರಿಸಿದ ಸರ್ಕಾರಿ ಶಾಲೆಗೆ ಶೌಚಾಲಯದ ಕೊರತೆ:
ಇದೇ ಗ್ರಾಮದಲ್ಲಿ ಇತ್ತೀಚಿಗಷ್ಟೇ ಶತಮಾನೋತ್ಸವ ಆಚರಿಸಿದ ಸರ್ಕಾರಿ ಪ್ರಾಥಮಿಕ ಶಾಲೆಯೂ ಇದೆ. ಕಳೆದ ನಾಲ್ಕೈದು ವರ್ಷಗಳ ಹಿಂದೆಯೇ ಶಾಲೆಯ ಎರಡು ಕೊಠಡಿಗಳು ಬಿದ್ದು ಹೋಗಿದ್ದರು ಕೂಡ ಸ್ಥಳೀಯ ಜನಪ್ರತಿನಿಧಿಗಳು ದುರಸ್ತಿ ಮಾಡಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಇನ್ನು ಶಾಲೆಯಲ್ಲಿ ಹೆಣ್ಣುಮಕ್ಕಳು ಹೆಚ್ಚಾಗಿದ್ದು, ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲ.
ಸರ್ಕಾರಿ ಪ್ರಾಥಮಿಕ ಶಾಲೆಯ ವ್ಯವಸ್ಥೆ ಒಂದೂವರೆ ವರ್ಷದ ಹಿಂದೆ ಶೌಚಾಲಯ ಬಿದ್ದು ಹೋಗಿದ್ದು, ನೀರಿನ ವ್ಯವಸ್ಥೆಯೂ ಕೂಡ ಇಲ್ಲದಿರುವುದರಿಂದ ಹಾಗೂ ಶಾಲೆಯ ಸುತ್ತ ಕಾಂಪೌಂಡ್ ಕೂಡ ಇಲ್ಲದ ಕಾರಣ ಹೆಣ್ಣುಮಕ್ಕಳು ಶೌಚಾಲಯಕ್ಕೆ ಹೋಗಬೇಕಾದ್ರೆ ರಕ್ಷಣೆಗೋಸ್ಕರ ಅಲ್ಲಿನ ಮಹಿಳಾ ಶಿಕ್ಷಕಿಯರು ಅವರ ಹಿಂದೆ ಹೋಗುವುದು ಇಂದಿನ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ.
ಇದೇ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ:
ಇನ್ನು ಇಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಮತ್ತು ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಇದೇ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಗ್ರಾಮ ವಾಸ್ತವ್ಯ ಮಾಡುವ ಹಿನ್ನೆಲೆ ಗ್ರಾಮದ ದೇವರಾಜ್ ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದಲ್ಲಿ ತರಾತುರಿಯಲ್ಲಿ ಕೆಲಸಗಳು ನಡೆಯುತ್ತಿವೆ. ಗ್ರಾಮ ವಾಸ್ತವ್ಯಕ್ಕಾಗಿ ಜಿಲ್ಲಾಧಿಕಾರಿ ಮತ್ತು ರಾಜ್ಯ ಗೃಹ ಮಂಡಳಿ ಅಧ್ಯಕ್ಷರಿಗೆ ಬೇಕಾಗುವಂತಹ ಮೂಲಭೂತ ಸೌಕರ್ಯಗಳನ್ನು ಮಾಡುತ್ತಿರುವುದು ಇತರ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಎಲ್ಲವೂ ಚೆನ್ನಾಗಿರುವ ಬಿಸಿಎಂ ಹಾಸ್ಟೆಲ್ನಲ್ಲಿ ವಾಸ್ತವ್ಯ ಹೂಡುವ ಬದಲು ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದರೆ ಅಲ್ಲಿನ ಹೆಣ್ಣುಮಕ್ಕಳ ಸಮಸ್ಯೆಯಿಂದ ಹಿಡಿದು ಪ್ರತಿನಿತ್ಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅನುಭವಿಸುತ್ತಿರುವ ಕಷ್ಟಗಳು ಗೊತ್ತಾಗುತ್ತದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಅಧಿಕಾರಿಗಳು ಗ್ರಾಮ ವಾಸ್ತವ್ಯ ಹೂಡುವ ಗ್ರಾಮದಲ್ಲೇ ಸಮಸ್ಯೆಗಳ ಸರಮಾಲೆ ವಿದ್ಯುತ್ ಸಂಪರ್ಕ ಕಡಿತ:
ಇನ್ನು ಈ ಗ್ರಾಮಕ್ಕೆ ನಿರಂತರ ಜ್ಯೋತಿ ಯೋಜನೆ ಅನುಷ್ಠಾನವಾಗಿದ್ದರೂ ಕೂಡ ಪ್ರತಿನಿತ್ಯ 10-15 ಬಾರಿ ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ. ಇದರಿಂದ ಈ ಗ್ರಾಮದ ಸುತ್ತಮುತ್ತ ಇರುವ ಕೆಲವು ಸಣ್ಣ-ಪುಟ್ಟ ಉದ್ದಿಮೆಗಳಿಗೆ ಪ್ರತಿನಿತ್ಯ ನಷ್ಟವಾಗುತ್ತಿದೆ. ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಬೆಂಗಳೂರಲ್ಲಿ ಮಳೆಯಾದರೆ ಸಾಕು ಜೆಸಿ ಪಡದಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಾರೆ. ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಯನ್ನು ಕೇಳಿದರೆ ಅವರು ಕಾಟಾಚಾರದ ಉತ್ತರ ನೀಡಿ ಕಳಿಸುತ್ತಾರೆ. ಇಂತಹ ಸಮಸ್ಯೆಯಿಂದ ಮುಕ್ತಿ ಕೊಡಿ ಎನ್ನುತ್ತಾರೆ ಗ್ರಾಮಸ್ಥರು.