ಹಾಸನ:ಮುಂಬರುವ ವಿಧಾನಸಭಾ ಅಧಿವೇಶನ ಮುಗಿಯುವುದರೊಳಗೆ ಪರಿಶಿಷ್ಟ ಪಂಗಡಕ್ಕೆ ಶೇ. 7.5 ಮೀಸಲಾತಿ ಅನುಷ್ಠಾನಗೊಳಿಸದಿದ್ದರೆ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಶ್ರೀ ವಾಲ್ಮೀಕಿ ನಾಯಕ ಜನಾಂಗದ ಕ್ಷೇಮಾಭಿವೃದ್ಧಿ ಜಿಲ್ಲಾಧ್ಯಕ್ಷ ಜಿ.ಓ.ಮಹಂತಪ್ಪ ಎಚ್ಚರಿಕೆ ನೀಡಿದರು.
ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ನೀಡುವಂತೆ ವಾಲ್ಮೀಕಿ ಜನಾಂಗ ಒತ್ತಾಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 1952ರಲ್ಲಿ ಪರಿಶಿಷ್ಟ ಪಂಗಡಕ್ಕೆ ಕೇವಲ ಶೇ.3 ಮೀಸಲಾತಿ ನಿಗದಿಗೊಳಿಸಿದ್ದು, ಆ ಸಂದರ್ಭದಲ್ಲಿ 10 ಲಕ್ಷ ಜನಸಂಖ್ಯೆ ಇತ್ತು. ಆದರೆ ಪ್ರಸ್ತುತ ರಾಜ್ಯದಲ್ಲಿ ಪರಿಶಿಷ್ಟ ಪಂಗಡವು 80 ಲಕ್ಷ ಜನಸಂಖ್ಯೆ ಹೊಂದಿದ್ದು, ಇಂದಿಗೂ ಶೇ.3ರಷ್ಟು ಮೀಸಲಾತಿ ಮುಂದುವರೆಸಿಕೊಂಡು ಬಂದಿರುವುದು ಪರಿಶಿಷ್ಟ ಪಂಗಡಕ್ಕೆ ಮಾಡಿರುವ ಘೋರ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ ಬಂದ 24 ಗಂಟೆಯೊಳಗೆ ಪರಿಶಿಷ್ಟ ಪಂಗಡ ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಳ ಮಾಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಲಿಂಗಸೂರಿನಲ್ಲಿ ನಡೆದ ಎಸ್.ಟಿ. ಸಮಾವೇಶದಲ್ಲಿ ಘೋಷಣೆ ಮಾಡಿದ್ದು, ಒಂದು ವರ್ಷ ಕಳೆದರೂ ಹೆಚ್ಚಳ ಮಾಡದಿರುವುದು ಖಂಡನಾರ್ಹ ಎಂದರು.
ಶ್ರೀ ಪ್ರಸನ್ನಾನಂದ ಸ್ವಾಮೀಜಿ ಕಳೆದ ಒಂದು ವರ್ಷದ ಹಿಂದೆ ಸುಮಾರು 365 ಕಿ.ಮೀ. ಪಾದಯಾತ್ರೆ ಮಾಡಿ ಫ್ರೀಡಂ ಪಾರ್ಕ್ನಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ನಿಮ್ಮ ಭರವಸೆಯನ್ನು ಇನ್ನೆರಡು ತಿಂಗಳಲ್ಲಿ ಈಡೇರಿಸುವುದಾಗಿ ಮಾತನ್ನು ನೀಡಿ ಅಂದಿನ ಸರ್ಕಾರ ಒಂದು ಆಯೋಗವನ್ನು ರಚನೆ ಮಾಡಿದರು. ಆಯೋಗವು ವರದಿಯನ್ನು ನೀಡಿದೆ. ಒಂದು ತಿಂಗಳ ನಂತರ ಮೀಸಲಾತಿಯನ್ನು ಹೆಚ್ಚಳ ಮಾಡುತ್ತೇವೆಂದು ಭರವಸೆಯನ್ನು ನೀಡಿದ್ದರು. ಆದರೆ ನ್ಯಾಯಮೂರ್ತಿ ನಾಗಮೋಹನ್ ದಾಸ್ರವರು ವರದಿಯನ್ನು ನೀಡಿ 3 ತಿಂಗಳು ಕಳೆದಿದ್ದರೂ ಕೂಡ ಇನ್ನು ಮೀಸಲಾತಿಯ ಹೆಚ್ಚಳವನ್ನು ಮಾಡಿರುವುದಿಲ್ಲ. ಸೆ.21 ರಂದು ಅಧಿವೇಶನ ಕರೆದಿದ್ದ, ಅಧಿವೇಶನ ಪ್ರಾರಂಭವಾಗುವ ಮುನ್ನಾ ಮೀಸಲಾತಿಯನ್ನು ಶೇ 7.5 ರಷ್ಟುಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.