ಹಾಸನ: ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ತಿದ್ದಿ ಬುದ್ಧಿ ಹೇಳಿ ಉತ್ತಮ ಮಾರ್ಗದರ್ಶನ ನೀಡಿ, ತಮ್ಮಲ್ಲಿರುವ ಜ್ಞಾನವನ್ನು ಧಾರೆ ಎರೆದು ವಿದ್ಯಾರ್ಥಿಗಳಿಗೆ ಉತ್ತಮ ಜೀವನವನ್ನು ರೂಪಿಸುವ ಶಿಕ್ಷಕರೇ ಸಮಾಜದ ಅಭಿವೃದ್ಧಿಗೆ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹೇಳಿದರು.
ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರದ ಎಸ್.ಆರ್.ಎಸ್. ಪ್ರಜ್ಞಾ ಶಾಲೆಯಲ್ಲಿ ಏರ್ಪಡಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶ್ರೇಷ್ಠ ಶಿಕ್ಷಣ ತಜ್ಞರು, ಆಧ್ಯಾತ್ಮಿಕ ಚಿಂತಕರು, ತತ್ವಜ್ಞಾನಿಗಳು ಹಾಗೂ ಉತ್ತಮ ಆಡಳಿತಗಾರರೂ ಆಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಭಾರತದ ಎರಡನೇ ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸಿದರು. ರಾಷ್ಟ್ರಪತಿಗಳ ಅವಧಿ ಮುಗಿದ ನಂತರ ಪ್ರಾಧ್ಯಾಪಕರಾಗಿ ಮುಂದುವರೆಯುವ ಮೂಲಕ ದೇಶಕ್ಕೆ ಉತ್ತಮ ಕೊಡುಗೆಯನ್ನು ನೀಡಿದ ಮಹಾನ್ ವ್ಯಕ್ತಿ ಎಂದು ಹೇಳಿದರು.