ಸಕಲೇಶಪುರ: ಜೆಡಿಎಸ್ ಸರ್ಕಾರ ಇದ್ದಾಗ ಕಾಡಾನೆ ಸಮಸ್ಯೆ ಬಗೆಹರಿಸಲು ಮುಂದಾಗದ ಶಾಸಕರು ಇದೀಗ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ ಎಂದು ಬಿಜೆಪಿ ತಾಲೂಕು ಘಟಕ ಅಧ್ಯಕ್ಷ ಮಂಜುನಾಥ್ ಸಂಘಿ ಪ್ರಶ್ನಿಸಿದರು.
ಕಾಡಾನೆ ಸಮಸ್ಯೆ ಬಗೆಹರಿಸಲು ನಡೆದ ಸಭೆ ತಾಲೂಕಿನ ಹಲಸುಲಿಗೆ ಗ್ರಾಮದಲ್ಲಿ ಕಾಡಾನೆ ದಾಳಿ ಪೀಡಿತ ಬೆಳೆಗಾರರ ಜತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಬಿಜೆಪಿ 2014ರಲ್ಲಿ ಚಂಗಡಹಳ್ಳಿಯಿಂದ ಸಕಲೇಶಪುರಕ್ಕೆ ಪಾದಯಾತ್ರೆ ಮಾಡಲಾಗಿತ್ತು. ಈ ಬಳಿಕ ಸುಮಾರು 21 ಕಾಡಾನೆ ಸ್ಥಳಾಂತರಿಸಲಾಗಿತ್ತು. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಅರಣ್ಯ ಸಚಿವರ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಯತ್ನಿಸುವುದಾಗಿ ಭರವಸೆ ನೀಡಿದರು.
ಕಾಡಾನೆ ದಾಳಿ ಸಮಸ್ಯೆ ಕುರಿತು ಸಂಸತ್ತಿನಲ್ಲಿ ಪ್ರಶ್ನಿಸಬೇಕಾದ ಜಿಲ್ಲೆಯ ಸಂಸದರು ನಾಪತ್ತೆ ಆಗಿದ್ದು, ಅವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಆಗಿದೆ. ಕೂಡಲೇ ಶಾಸಕರು ವಿನಾ ಕಾರಣ ಬಿಜೆಪಿ ಸರ್ಕಾರವನ್ನು ದೂರುವ ಬದಲು ಪ್ರಾಮಾಣಿಕವಾಗಿ ಸಮಸ್ಯೆ ಬಗೆಹರಿಸಲು ಮುಂದಾದರೆ ನಾವು ಬೆಂಬಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ, ಲಾಕ್‌ಡೌನ್ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನಗಳ ತಿರುಗಾಟ ಕಡಿಮೆ ಆಗಿದ್ದರಿಂದ ಕಾಡಾನೆಗಳು ಹೆದ್ದಾರಿಯ ಒಂದು ಭಾಗ ದಾಟಿ ಹಲಸುಲಿಗೆ ಸುತ್ತಮುತ್ತಲು ಬೀಡುಬಿಟ್ಟಿವೆ. ಇದರಿಂದ ಸ್ಥಳೀಯರು ಆತಂಕದಲ್ಲಿ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತೋಟ- ಗದ್ದೆಗಳಿಗೆ ಕಾರ್ಮಿಕರು ಕೆಲಸ ಮಾಡಲು ಬರುತ್ತಿಲ್ಲ. ಅಪಾರ ಪ್ರಮಾಣದ ಕಾಫಿ, ಮೆಣಸು, ಭತ್ತ, ಬಾಳೆ ಬೆಳೆಗಳು ನಷ್ಟವಾಗುತ್ತಿವೆ. ಸರ್ಕಾರ ನೀಡುತ್ತಿರುವ ಬೆಳೆ ಪರಿಹಾರ ಸಾಕಾಗುತ್ತಿಲ್ಲ. ನಮಗೆ ಬೆಳೆ ಪರಿಹಾರ ಬೇಡ. ಕಾಡಾನೆಗಳನ್ನು ಕೂಡಲೇ ಈ ಭಾಗದಿಂದ ಸ್ಥಳಾಂತರಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.
ತಾ.ಪಂ ಅಧ್ಯಕ್ಷೆ ಶ್ವೇತಾ ಪ್ರಸನ್ನ, ತಾ.ಪಂ ಸದಸ್ಯ ಸಿಮೆಂಟ್ ಮಂಜುನಾಥ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ , ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಜೀತು, ಎಸ್.ಸಿ ಮೋರ್ಚಾ ಅಧ್ಯಕ್ಷ ಲೋಕೇಶ್ ಜಾನೆಕೆರೆ, ಪಕ್ಷದ ಮುಖಂಡರಾದ ಕೊಲ್ಲಹಳ್ಳಿ ಬಾಲರಾಜ್, ಮಾಸವಳ್ಳಿ ಚಂದ್ರು, ಗ್ರಾಮಸ್ಥರು ಹಾಜರಿದ್ದರು.