ಹಾಸನ:ಮಳೆಯಿಂದ ಈಗಾಗಲೇ ವಿವಿಧ ಬೆಳೆಗಳು ಹಾನಿಯಾಗಿದ್ದು, ಬೆಳೆ ಸಮೀಕ್ಷೆ ಮಾಡುವಾಗ ಯಾವ ರೈತರಿಗೂ ಮೋಸವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಶೀಲನಾ (ಕೆಡಿಪಿ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳೆವಿಮೆ ಹಾಗೂ ಇತರ ಸರ್ಕಾರದ ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಿ ರೈತರಿಗೆ ಅರಿವು ಮೂಡಿಸಬೇಕು. ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ಮುಂಜಾಗ್ರತೆವಹಿಸಿ ಮತ್ತು ಮಳೆ ಹಾನಿಯಿಂದಾಗಿರುವ ನಷ್ಟಕ್ಕೆ ಸಕಾಲದಲ್ಲಿ ಪರಿಹಾರ ಒದಗಿಸಿ ಎಂದು ಅವರು ಸೂಚನೆ ನೀಡಿದರು.
ಆಲೂಗಡ್ಡೆ ಬಿತ್ತನೆಯಿಂದ ಸಾಕಷ್ಟು ಹಾನಿ ಸಂಭವಿಸಿದ್ದು, ರೈತರಿಗೆ ಪರಿಹಾರ ಒದಗಿಸಿ ಮುಂದಿನ ದಿನಗಳಲ್ಲಿ ಆದಷ್ಟು ದೃಢೀಕೃತ ಬಿತ್ತನೆ ಬೀಜ ಪೂರೈಕೆಗೆ ಪ್ರಯತ್ನ ನಡೆಸಬೇಕು. ಬೆಳೆ ಸಮೀಕ್ಷೆ ಅತ್ಯಂತ ನಿಖರವಾಗಿ ನಡೆಯಬೇಕು. ಯಾವುದೇ ರೈತರು ಇದರಿಂದ ಕೈಬಿಟ್ಟು ಹೋಗಬಾರದು ಎಂದರು.
ಕಾಲುಬಾಯಿ ಜ್ವರ ಸೇರಿದಂತೆ ವಿವಿಧ ರೋಗಗಳಿಗೆ ದನಕರುಗಳಿಗೆ ಸಕಾಲದಲ್ಲಿ ಲಸಿಕೆ ನೀಡಬೇಕು. ಅದೇ ರೀತಿ ಮೇವು ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಬಗ್ಗೆ ಗಮನ ಹರಿಸುವಂತೆ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು. ಮಕ್ಕಳು ಕೇವಲ ಪರೀಕ್ಷಾ ಉದ್ದೇಶಕ್ಕೆ ಸಿದ್ಧ ಮಾಡದೇ ಇದ್ದರೂ ವ್ಯಕ್ತಿತ್ವ ವಿಕಾಸ ಹಾಗೂ ಬೌದ್ಧಿಕ ಗುಣಮಟ್ಟ ವೃದ್ಧಿಗೆ ಪ್ರಯತ್ನಿಸಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಜಿಲ್ಲೆಯಲ್ಲಿ ಖಾಲಿ ಇರುವ ವೈದ್ಯರು ಹಾಗೂ ತಂತ್ರಜ್ಞರು, ಸ್ಟಾಫ್ ನರ್ಸ್‌ಗಳ ಹುದ್ದೆಯನ್ನು ಶೀಘ್ರವಾಗಿ ಭರ್ತಿ ಮಾಡಿ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ಹಾಗೂ ಊಟೋಪಚಾರ ನೀಡಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದೊರೆಯುತ್ತಿರುವ ಚಿಕಿತ್ಸೆ ಹಾಗೂ ಪಡೆಯುತ್ತಿರುವ ಬಿಲ್‌ಗಳ ಬಗ್ಗೆಯೂ ನಿಗಾವಹಿಸಿ ಎಂದರು.
ಆಯುಷ್ ಇಲಾಖೆ ವತಿಯಿಂದ ಕಷಾಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಪೂರೈಸಬೇಕು. ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳಿಂದ ಒದಗಿಸಲಾಗುವ ಸೌಲಭ್ಯಗಳು ಫಲಾನುಭವಿಗಳಿಗೆ ದೊರಕುವಂತೆ ಕ್ರಮ ವಹಿಸಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಯನ್ನು ಫಲಾನುಭವಿಗಳಿಗೆ ಆದಷ್ಟು ಬೇಗ ಕೊರೆಸಿ ಕೊಡಬೇಕು. ಯಾವುದೇ ಸೌಲಭ್ಯಗಳು ವಿಳಂಬವಾಗದಂತೆ ಫಲಾನುಭವಿಗಳಿಗೆ ಪೂರೈಕೆ ಮಾಡಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್‌ಗಳು ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳ ವೀಕ್ಷಣೆಗೆ ತೊಂದರೆಯಾಗಬಾರದು. ಆ ನಿಟ್ಟಿನಲ್ಲಿ ನಿರಂತರ ಜ್ಯೋತಿ ಸೌಲಭ್ಯ ಯಾವ ಯಾವ ಹಳ್ಳಿಗಳಲ್ಲಿ ಇಲ್ಲ ಎಂಬುದನ್ನು ಗುರುತಿಸಿ ವಿದ್ಯುತ್ ಸೌಲಭ್ಯ ಒದಗಿಸಿ. ಪ್ರವಾಸೋದ್ಯಮ ಇಲಾಖೆ ವತಿಯಿಂದ ಅರ್ಹ ಫಲಾನುಭವಿಗಳಿಗೆ ಟ್ಯಾಕ್ಸಿ ಖರೀದಿಸಲು ಸಬ್ಸಿಡಿ ನೀಡಲಾಗುತ್ತಿದ್ದು, ಬ್ಯಾಂಕ್ಗಳಿಂದ ಸರಿಯಾದ ಸಹಕಾರ ದೊರೆಯುತ್ತಿಲ್ಲ ಎಂಬ ದೂರುಗಳಿವೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಐಬಿ ಹಾಗೂ ಯಾತ್ರಿ ನಿವಾಸಗಳ ಸೂಕ್ತ ನಿರ್ವಹಣೆಯಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.