ಹಾಸನ:ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಬೆಂಗಳೂರು ಮತ್ತು ಮಂಗಳೂರು ರಸ್ತೆ ಬಿರುಕು ಬಿಟ್ಟು ಭೂ-ಕುಸಿತವಾಗಿದೆ. ಹೀಗಾಗಿ ಜಿಲ್ಲಾಡಳಿತ 4 ದಿನಗಳ ಕಾಲ ರಸ್ತೆ ಬಂದ್ ಮಾಡುವುದಾಗಿ ತಿಳಿಸಿದ್ದು, ತಾತ್ಕಾಲಿಕವಾಗಿ ಈ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಜಿಲ್ಲೆಯಲ್ಲಿ ವಾರದಿಂದ ಸುರಿಯುತ್ತಿರುವ ಮಳೆಗೆ ಅಕ್ಷರಶಃ ಮಲೆನಾಡು ಭಾಗ ನಲುಗಿ ಹೋಗಿದೆ. ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಭಾರಿ ಮಳೆ, ಗಾಳಿಗೆ ಈಗಾಗಲೇ 6ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿದ್ದು, ಇಂದು ಕೂಡ ಮಂಗಳೂರು ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಾಲ್ ಬಳಿ ರಸ್ತೆ ಬಿರುಕು ಬಿಟ್ಟಿದೆ. ಹೀಗಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ.
ರಸ್ತೆಯಲ್ಲಿ ಮಳೆಯ ನೀರು ಹರಿಯುತ್ತಿದ್ದು, ತೇವಾಂಶ ಹೆಚ್ಚಾದ ಹಿನ್ನೆಲೆಯಲ್ಲಿ ಸಕಲೇಶಪುರ ದೋಣಿಗಾಲ್ ಬಳಿ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿತವಾಗಿದೆ. ಮೊನ್ನೆ ಮೊನ್ನೆಯಷ್ಟೆ ರಸ್ತೆ ಕುಸಿತ ಎಂಬ ಸುದ್ದಿಯನ್ನು 'ಈಟಿವಿ ಭಾರತ' ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಈಗ ಹೆದ್ದಾರಿಯೇ ಕುಸಿದಿದೆ. ಹೀಗಾಗಿ ಕಿಲೋ ಮೀಟರ್ ಗಟ್ಟಲೆ ವಾಹನಗಳು ಸರದಿ ಸಾಲಿನಲ್ಲಿ ನಿಂತಿದ್ದು, ಪರ್ಯಾಯ ಮಾರ್ಗದಲ್ಲಿಯೂ ಹೋಗಲು ಸಾಕಷ್ಟು ಶ್ರಮಪಡುವ ಸ್ಥಿತಿ ನಿರ್ಮಾಣವಾಗಿದೆ.