ಕರ್ನಾಟಕ

karnataka

ETV Bharat / state

ವನ್ಯಜೀವಿಗಳ ಹಾವಳಿ ತಡೆಗೆ ವೈಜ್ಞಾನಿಕ ಕ್ರಮ ಅನಿವಾರ್ಯ.. ಸಚಿವ ಹೆಚ್‌. ಡಿ ರೇವಣ್ಣ

ವನ್ಯ ಜೀವಿಗಳ ಹಾವಳಿ ಶಾಶ್ವತ ನಿಯಂತ್ರಣಕ್ಕೆ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ. ಅದಕ್ಕಾಗಿ ಎಲ್ಲಾ ರೀತಿಯ ಅಧ್ಯಯನ, ಅಭಿಪ್ರಾಯ ಸಂಗ್ರಹ ಅಗತ್ಯ.

ಸಚಿವ ಹೆಚ್.ಡಿ.ರೇವಣ್ಣ

By

Published : Jul 2, 2019, 9:16 AM IST

ಹಾಸನ: ಜಿಲ್ಲೆಯಲ್ಲಿ ಆನೆ ಹಾವಳಿ ನಿಯಂತ್ರಣ ಕ್ರಮಗಳ ಕುರಿತು ಅಧ್ಯಯನ ನಡೆಸಲು ಶೀಘ್ರದಲ್ಲೇ ತಜ್ಞರ ತಂಡವನ್ನು ಶ್ರೀಲಂಕಾಗೆ ಕಳುಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಆನೆ ಟಾಸ್ಕ್‌ಫೋರ್ಸ್ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ವನ್ಯ ಜೀವಿಗಳ ಹಾವಳಿ ಶಾಶ್ವತ ನಿಯಂತ್ರಣಕ್ಕೆ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ. ಅದಕ್ಕಾಗಿ ಎಲ್ಲಾ ರೀತಿಯ ಅಧ್ಯಯನ, ಅಭಿಪ್ರಾಯ ಸಂಗ್ರಹ ಅಗತ್ಯ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಹಲವು ವರ್ಷಗಳಿಂದ ಆನೆ ಹಾವಳಿ ಹಾಗೇ ಮುಂದುವರೆದಿದೆ. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ. ಜಿಲ್ಲಾಧಿಕಾರಿಗಳು ಕೂಡಲೇ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ಪರಿಸರವಾದಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ಪ್ರಸ್ತಾವನೆಯನ್ನು ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚನೆ ನೀಡಿದರು.

ಸಚಿವ ಹೆಚ್ ಡಿ ರೇವಣ್ಣ ನೇತೃತ್ವದಲ್ಲಿ ಅಧಿಕಾರಿಗಳ ಸಭೆ..

ಅಲ್ಲದೇ ಆನೆ ಹಾವಳಿ ತಡೆಗೆ ಹಾಗೂ ವೈಜ್ಞಾನಿಕ ರೀತಿಯ ಪರಿಹಾರ ಕ್ರಮಗಳಿಗೆ ಮುಂಬರುವ ವಿಧಾನಸಭಾ ಅಧಿವೇಶನಕ್ಕೆ ಮುನ್ನಾ ಅಥವಾ ನಂತರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇನ್ನೊಂದು ಸುತ್ತಿನ ಪ್ರಮುಖ ಸಭೆ ಕರೆದು ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದರು. ಅರಣ್ಯ ಇಲಾಖೆಯಿಂದ ಈಗಾಗಲೇ ನೇಮಕ ಮಾಡಲ್ಪಟ್ಟಿರುವ 120 ಅರಣ್ಯ ಸಿಬ್ಬಂದಿ ತಂಡ ನಿತ್ಯ ಮಲೆನಾಡು ಭಾಗದಲ್ಲಿ ಕೈಗೊಂಡಿರುವ ಕಾರ್ಯದ ಬಗ್ಗೆ ಪ್ರಾತ್ಯಕ್ಷಿಕೆಯನ್ನ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ ಬಾಬು ನೀಡಿದ್ರು.

ಸಕಲೇಶಪುರ ತಾಲೂಕಿನ ಆನೆ ಹಾವಳಿ ಪ್ರದೇಶಗಳಲ್ಲಿ ಅರಣ್ಯ ಕಾಲೇಜು ಮತ್ತು 2 ಮುರಾರ್ಜಿ ವಸತಿ ಶಾಲೆ ಸ್ಥಾಪನೆಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸಕಲೇಶಪುರ ಶಾಸಕ ಹೆಚ್ ಕೆ ಕುಮಾರಸ್ವಾಮಿ, ಸಭೆಯ ಗಮನ ಸೆಳದ್ರು. ಅಲ್ಲದೇ ಆನೆ ದಾಳಿಗೆ ತುತ್ತಾದ ಕುಟುಂಬಕ್ಕೆ ಸರಿಯಾದ ಪರಿಹಾರ ದೊರಕುತ್ತಿಲ್ಲ. ಅದರ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದರು. ಆನೆ ಹಾವಳಿ ಪ್ರದೇಶದಲ್ಲಿನ ಮಕ್ಕಳನ್ನು ಶಾಲೆಗೆ ಕಳುಹಿಸಲು ಅರಣ್ಯ ಇಲಾಖೆ ಮಾಡಿರುವ ಕ್ರಮ ಹಾಗೂ ಆನೆಗಳಿಗೆ ರೆಡಿಯೋ ಕಾಲರ್ ಅಳವಡಿಕೆ ಮೂಲಕ ಅವುಗಳ ಚಲನವಲನಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯ ಪರಿಣಾಮಕಾರಿಯಾಗಬೇಕು. ಆನೆ ಕಾರಿಡಾರ್ ಸೇರಿದಂತೆ ವಿವಿಧ ವಿಷಯಗಳ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯಲು ನಿಯೋಗ ಕರೆದೊಯ್ಯುವಂತೆ ಅವರು ಒತ್ತಾಯಿಸಿದರು.

ಹಾಸನ ಹೊರವಲಯದ ಬುರಡಾಳು ಬೋರೆ ಸೇರಿದಂತೆ ಜಿಲ್ಲೆಯಲ್ಲಿ ಅರಣ್ಯ ಪ್ರದೇಶದಲ್ಲಿರುವ ಪರಿಸರಕ್ಕೆ ಮಾರಕವಾದ ಸಸಿಗಳನ್ನು ತೆಗೆದು ವನಸ್ನೇಹಿ ಗಿಡಗಳನ್ನು ಮಾತ್ರ ನೆಡಬೇಕು. ಅರಣ್ಯ ವ್ಯಾಪ್ತಿಯಲ್ಲಿ ಕೆರೆ ಕಟ್ಟೆಗಳನ್ನು ಅಭಿವೃದ್ದಿ ಪಡಿಸಬೇಕು. ಇದಕ್ಕೆ 10 ಕೋಟಿ ರೂ. ಅನುದಾನವನ್ನು ಅರಣ್ಯ ಇಲಾಖೆಗೆ ನಬಾರ್ಡ್ ಯೋಜನೆಗಳಲ್ಲಿ ತಾವು ಒದಗಿಸುವುದಾಗಿ ಸಚಿವರು ಹೇಳಿದರು.

For All Latest Updates

TAGGED:

ABOUT THE AUTHOR

...view details