ಅರಕಲಗೂಡು(ಹಾಸನ): ಸೋಂಕು ಹರಡದಂತೆ ನಾವು ಮುನ್ನೆಚ್ಚರಿಕಾ ಕ್ರಮಗಳ ಜೊತೆಗೆ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇವೆ. ಇದಕ್ಕೆ ಸರ್ಕಾರ ಕೂಡ ಸ್ಪಂದಿಸುತ್ತಿದೆ ಎಂದು ಶಾಸಕ ಎ. ಟಿ. ರಾಮಸ್ವಾಮಿ ಹೇಳಿದರು.
ಪ್ರತಿ ಗ್ರಾಮಕ್ಕೆ ಸ್ಯಾನಿಟೈಸ್ ಮಾಡುವುದರೊಂದಿಗೆ ಪರೀಕ್ಷೆಗೊಳಪಡಿಸಬೇಕು: ಎ. ಟಿ. ರಾಮಸ್ವಾಮಿ ಹಾಸನದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಗ್ರಾಮಕ್ಕೂ ಸ್ಯಾನಿಟೈಸ್ ಮಾಡುವ ಜೊತೆಗೆ ಪ್ರತಿ ಗ್ರಾಮದಲ್ಲಿ ಪರೀಕ್ಷೆಗೆ ಒಳಪಡುವಂತೆ ಮಾಡಬೇಕು. ಸೋಂಕಿತರಿಗೆ, ಆಶಾ ಕಾರ್ಯಕರ್ತರಿಗೆ ಹಾಗೂ ಕೋವಿಡ್ ವಾರಿಯರ್ಸ್ಗಳಿಗೆ ಸ್ಯಾನಿಟೈಸರ್ ಪೂರೈಕೆ ಮಾಡಬೇಕು. ಜೊತೆಗೆ ಸೋಂಕಿತ ಗ್ರಾಮಕ್ಕೆ ಸೀಲಿಂಗ್ ಮಾಡುವ ಯೋಜನೆ ರೂಪಿತವಾಗಬೇಕು.
ತಾಲೂಕು ಆಡಳಿತ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಹೋಲಿಕೆ ಮಾಡಿದರೆ ಅರಕಲಗೂಡಿನಲ್ಲಿ ಹೆಚ್ಚು ಸೋಂಕಿತರು ಕಂಡು ಬರುತ್ತಿದ್ದಾರೆ. ಆಸ್ಪತ್ರೆಯಲ್ಲಿ ಕಡಿಮೆ ವೈದ್ಯರು ಇರುವ ಕಾರಣ ಅವರೇ ಹೆಚ್ಚಿನ ಸಮಯ ಕಾರ್ಯ ನಿರ್ವಹಿಸುತ್ತಿದ್ದು ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದರು.
ಸೋಂಕು ನಿರ್ವಹಣೆಗಾಗಿ 2 ಗ್ರಾಮ ಪಂಚಾಯಿತಿಗೆ ಒಬ್ಬರಂತೆ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿತ್ತು. ಪ್ರತಿ ಎರಡು ಗ್ರಾಮಪಂಚಾಯಿತಿಗೆ ವಾರದಲ್ಲಿ ಒಂದು ಬಾರಿ ಕೋವಿಡ್-19 ಸೂಚನೆಗಳನ್ನು ನೀಡುವ ಮೂಲಕ ಗ್ರಾಮದಲ್ಲಿ ಸೋಕು ಹರಡುವ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಸೂಚನೆ ನೀಡುತ್ತಿದ್ದೇನೆ.
ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ವೈದ್ಯರ ನೇಮಕ ಮಾಡದೆ ನಿರ್ಲಕ್ಷ್ಯ ವಹಿಸುವುದು ತರವಲ್ಲ. ಹೆಚ್ಚು ವೈದ್ಯಕೀಯ ಸಿಬ್ಬಂದಿಯನ್ನು ನೇಮಕ ಮಾಡಿ ಕೋವಿಡ್ ತಡೆಗಟ್ಟುವಲ್ಲಿ ಸರ್ಕಾರ ಚಿಂತನೆ ಮಾಡಬೇಕು. ಜತೆಗೆ ಜಿಲ್ಲೆಯಲ್ಲಿ ಆಮ್ಲಜನಕದ ಕೊರತೆಯಿದ್ದು ಲಭ್ಯತೆಗೆ ಅನುಗುಣವಾಗಿ ಆಮ್ಲಜನಕ ಪೂರೈಕೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು.
ತಾಲೂಕು ಆಡಳಿತ, ಪೊಲೀಸ್ ಇಲಾಖೆ ಸೇರಿ ಆರೋಗ್ಯ ಇಲಾಖೆಗೆ ಬೇಕಾಗಿರುವ ಜಂಬೋ ಸಿಲಿಂಡರ್ಗಳನ್ನು ಪೂರೈಸಿದೆ. ಜೊತೆಗೆ ಆಸ್ಪತ್ರೆಯಲ್ಲಿ ಆಮ್ಲಜನಕದ ಪ್ಲಾಂಟ್ ನಿರ್ಮಾಣಕ್ಕೆ ಅನುದಾನ ನೀಡಬೇಕು. ತುರ್ತು ವಾಹನ ಕೂಡ ಈಗಾಗಲೇ ರಿಪೇರಿಗೆ ಬಂದಿದ್ದು ಕೂಡಲೇ ಕೊಣನೂರು ಆಸ್ಪತ್ರೆಗೆ ಹೆಚ್ಚುವರಿ ಆ್ಯಂಬುಲೆನ್ಸ್ ನೀಡಬೇಕು ಎಂದರು.
ಹೊರಗಿನಿಂದ ಬಂದವರನ್ನು ನಾವು ಹೋಂ ಐಷೋಲೇಷನ್ ಮಾಡುತ್ತಿದ್ದೇವೆ. ಆದ್ರೆ ಕೆಲವರು ಮನೆಯಲ್ಲಿ ಇರದೆ ಮರದ ಕೆಳಗೆ ಮದ್ಯಪಾನ ಮಾಡುತ್ತಾ ಕೆಲವು ಅನೈತಿಕ ಚಟುವಟಿಕೆಗಳನ್ನು ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಅರಕಲಗೂಡಿನಲ್ಲಿ ಸಂಭವಿಸಿದ ಕಾರು ದುರಂತ ಪ್ರಕರಣ ಕೂಡಾ ಮದ್ಯಪಾನ ಮಾಡಿ ಕಾರು ಚಲಾಯಿಸಿದ್ದೇ ಅವಘಡಕ್ಕೆ ಕಾರಣವಾಗಿದೆ. ಮದ್ಯ ಸೇವನೆ ಮಾಡಿ ಪುಂಡಾಟಿಕೆ ನಡೆಸುತ್ತಿರುವ ಪ್ರಾಥಮಿಕ ಸೋಂಕಿತರನ್ನು ಗಮನಿಸುತ್ತಿರಬೇಕು. ಹೋಟೆಲ್ನಲ್ಲಿ ಪಾರ್ಸೆಲ್ ಬಿಟ್ಟು, ಟೀ ಅಂಗಡಿಯನ್ನು ಮುಚ್ಚಿಸಬೇಕು. ಆಗ ಮಾತ್ರ ನಾವು ಸಾರ್ವಜನಿಕರ ಹಿತಾಸಕ್ತಿ ಕಾಪಾಡುವುದರೊಂದಿಗೆ ಸೋಂಕು ತಡೆಯುವಲ್ಲಿ ಯಶಸ್ವಿಯಾಗುತ್ತೇವೆ ಎಂದರು.
ಅರಕಲಗೂಡು ತಾಲೂಕು ಆಸ್ಪತ್ರೆಗೆ ಪರಿಕರಗಳನ್ನು ತೆಗೆದುಕೊಳ್ಳಲು ಎಸ್ಡಿಆರ್ಎಫ್ ವಿಧಾನದ ಮೂಲಕ ಪಡೆಯುವುದಾಗಿದೆ. ಆಸ್ಪತ್ರೆಯ ಸೌಲಭ್ಯವನ್ನು ಮೇಲ್ದರ್ಜೆಗೇರಿಸುವ ಮತ್ತು ಹೆಚ್ಚುವರಿಯಾಗಿ 50 ಹಾಸಿಗೆಯಾಗಿ ಮಾರ್ಪಾಡು ಮಾಡಲು ಸ್ವಲ್ಪ ಅನುದಾನ ಬಿಡುಗಡೆ ಮಾಡಬೇಕು ಎಂದು ಇದೇ ವೇಳೆ ಸರ್ಕಾರಕ್ಕೆ ಆಗ್ರಹಿಸಿದರು.