ಹಾಸನ: ದಂಪತಿ ಕೈ ಕಾಲು ಕಟ್ಟಿ ಹಾಕಿ ದರೋಡೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಕಳೆದ ರಾತ್ರಿ ನಡೆದಿದೆ. ಹಾಸನ - ಬೇಲೂರು ರಸ್ತೆಯ ಸಮೀಪದಲ್ಲಿ ಬರುವ ಸಂಕೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಇಬ್ಬರೇ(ದಂಪತಿ) ಇದ್ದ ಮಾಹಿತಿ ಕಲೆ ಹಾಕಿದ ದರೋಡೆಕೋರರು, ಮನೆಗೆ ನುಗ್ಗಿ ರೇಣುಕುಮಾರ್ ದಂಪತಿ ಮೇಲೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ.
ಮನೆಯಲಿದ್ದ ಚಿನ್ನಾಭರಣ ಸೇರಿದಂತೆ ನಗದು ದೋಚಿ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ದಂಪತಿಯನ್ನು ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಎಸ್ಪಿ ಶ್ರೀನಿವಾಸ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ರಾತ್ರಿ 8 ಗಂಟೆ ಸುಮಾರಿನಲ್ಲಿ ಮನೆಗೆ ನುಗ್ಗಿದ ಕಳ್ಳರ ಗುಂಪು ದಂಪತಿಯ ಕೈಕಾಲು ಕಟ್ಟಿ ಬಳಿಕ ದರೋಡೆ ಮಾಡಿದ್ದಾರೆ. ಸಂಬಂಧಿಕರ ಮನೆಗೆ ಹೋಗಿದ್ದ ಮನೆಯ ಇತರ ಸದಸ್ಯರು ಇಂದು ಬೆಳಗ್ಗೆ ವಾಪಸ್ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. 8 ಮಂದಿಯಿದ್ದ ಗುಂಪಿನಲ್ಲಿ ಓರ್ವ ''ಕಿರುಚಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ. ಆತನನ್ನು ನಾನು ಈ ಮೊದಲೇ ನೋಡಿರುವ ನೆನಪಿದೆ'' ಎಂದು ರೇಣುಕುಮಾರ್ ಎಸ್ಪಿಯವರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ನಾನು ಸಾವಿಗೆ ಹೆದರುವವನಲ್ಲ: ಕೊಲೆ ಸಂಚಿಗೆ ವಿಶ್ವನಾಥ್ ಪ್ರತಿಕ್ರಿಯೆ
ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.