ಹಾಸನ :ಮೋದಿಯವರೇ ಬಡವರ ಬಗ್ಗೆ ನೀವು ಮಾತಾಡ್ತೀರಲ್ಲ ಸ್ವಾಮಿ, ನಿಮ್ಮ ರಾಷ್ಟ್ರೀಕೃತ ಬ್ಯಾಂಕ್‌ಗಳ ಮ್ಯಾನೇಜರ್ಗಳು ರೈತರ ಮನೆಗಳನ್ನು ಹಾಳು ಮಾಡುತ್ತಿದ್ದಾರೆ. ಅದು ನಿಮಗೆ ಗೊತ್ತಿದೆಯಾ ಎಂದು ಮೋದಿ ವಿರುದ್ಧ ಮಾಜಿ ಸಚಿವ ಹೆಚ್ ಡಿ ರೇವಣ್ಣ ಹರಿಹಾಯ್ದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಸ್ಕೀಮ್ಗಳಲ್ಲಿ ಫಲಾನುಭವಿಗಳಿಗೆ ಸಿಗಬೇಕಾದಂತಹ ಸಾಲ ಸೌಲಭ್ಯ ಮತ್ತು ಸಬ್ಸಿಡಿ ಹಣ 6 ತಿಂಗಳಾದ್ರೂ ನೀಡುತ್ತಿಲ್ಲ.
ರಾಷ್ಟ್ರೀಕೃತ ಬ್ಯಾಂಕ್‌ಗಳ ವಿರುದ್ಧ ಮಾಜಿ ಸಚಿವ ಹೆಚ್ ಡಿ ರೇವಣ್ಣ ಆಕ್ರೋಶ.. ಬ್ಯಾಂಕುಗಳಿಗೆ ಸುತ್ತಾಡಿ ರೈತರ ಚಪ್ಪಲಿಗಳು ಸವೆದು ಹೋಗುತ್ತಿವೆ. ಬ್ಯಾಂಕ್ ಅಧಿಕಾರಿಗಳು, ಜಿಲ್ಲಾಡಳಿತ ಮತ್ತು ಶಾಸಕರು, ಸಂಸದರನ್ನು ಒಳಗೊಂಡಂತೆ ಸಭೆ ಕರೆದು ಚರ್ಚೆ ಮಾಡಬೇಕು. ಜಿಲ್ಲೆಯ ಕಾರ್ಪೊರೇಷನ್ ಬ್ಯಾಂಕ್ ಹಾಗೂ ಕಾವೇರಿ ಗ್ರಾಮೀಣ ಬ್ಯಾಂಕ್ ರೈತರಿಗೆ ಬಹಳಷ್ಟು ಅನ್ಯಾಯ ಮಾಡುತ್ತಿವೆ.
ನನ್ನ ಕ್ಷೇತ್ರದಲ್ಲಿ ಮೊದಲು ಕಾವೇರಿ ಗ್ರಾಮೀಣ ಬ್ಯಾಂಕ್ ಮುಚ್ಚಿಸುತ್ತೇವೆ. ರೈತರಿಗೆ ಕೊರೊನಾ ವೇಳೆ ಮೂರ್ನಾಲ್ಕು ಪಟ್ಟು ಬಡ್ಡಿ, ಚಕ್ರಬಡ್ಡಿ ಹಾಕಿ ವಸೂಲಿ ಮಾಡಲು ಮುಂದಾಗಿವೆ. ಬ್ಯಾಂಕ್ ಖಾತೆಯನ್ನು ಹಿಂಪಡೆಯುವಂತೆ ನನ್ನ ಕ್ಷೇತ್ರದ ಜನರಿಗೆ ನಾನು ಕರೆ ಕೊಡುತ್ತೇನೆ ಎಂದು ಬ್ಯಾಂಕ್‌ಗಳ ವಿರುದ್ಧ ಗುಡುಗಿದರು.