ಹಾಸನ: 15 ದಿನಗಳಲ್ಲಿ ಸರ್ಕಾರ ಕ್ರಾಂತಿಕಾರಿ ಬದಲಾವಣೆಯೊಂದನ್ನು ತರುತ್ತಿದ್ದು, ಅರ್ಜಿ ರಹಿತ ಪಿಂಚಣಿ ಕೊಡುವ ವ್ಯವಸ್ಥೆಗೆ ನಾಂದಿ ಹಾಡುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಗ್ರಾಮ ಸ್ವರಾಜ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಅಶೋಕ್ ಗ್ರಾಮ ಸ್ವರಾಜ್ ಕಾರ್ಯಕ್ರಮಕ್ಕೆ ಆಗಮಿಸಿದ ಅಶೋಕ್ ಕಾರ್ಯಕ್ರಮಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಿಂಚಣಿ ನೀಡುವ ವ್ಯವಸ್ಥೆಯಲ್ಲಿ ಈಗಾಗಲೇ ಶೇಕಡಾ ಮೂರರಿಂದ ನಾಲ್ಕರಷ್ಟು ಹಣ ದುರುಪಯೋಗವಾಗುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಇಂತಹದೊಂದು ವಿನೂತನ ಯೋಜನೆಯನ್ನು ಇನ್ನು 15 ದಿನಗಳಲ್ಲಿ ರೂಪಿಸುವುದಾಗಿ ಹೇಳಿದರು.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಭಾರೀ ಗೆಲುವು ಸಾಧಿಸುವ ಮೂಲಕ ಕೇಂದ್ರದ ಯೋಜನೆಗಳನ್ನು ಗ್ರಾಮ ಮಟ್ಟಕ್ಕೂ ತಲುಪಿಸುವ ಕಾರ್ಯಕ್ಕಾಗಿ ಆರು ತಂಡಗಳನ್ನು ರಚನೆ ಮಾಡಿಕೊಂಡು ಗ್ರಾಮ ಸ್ವರಾಜ್ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ಬಾರಿ ಗ್ರಾಮೀಣ ಮಟ್ಟದಲ್ಲಿ ಬಿಜೆಪಿಯ ಬಾವುಟ ಹಾರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಗರ್ ಹುಕುಂ ಸಾಗುವಳಿ ಸಕ್ರಮ ಸಮಿತಿ ರಚನೆ ಈಗಾಗಲೇ 90ರಷ್ಟು ಮುಗಿದಿದ್ದು, ಉಳಿದ ಸಮಿತಿಗಳನ್ನು ಆದಷ್ಟು ಬೇಗ ರಚನೆ ಮಾಡಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಹಾಸನ ಜಿಲ್ಲೆಯ ಹೇಮಾವತಿ ಜಲಾಶಯ ಯೋಜನೆಯ ಪುನರ್ವಸತಿಯಲ್ಲಿ ಅಕ್ರಮ ನಡೆದಿದ್ದು, ಅದರ ತನಿಖೆಯನ್ನು ಕೂಡ ಪ್ರಾಮಾಣಿಕವಾಗಿ ಮಾಡಲಾಗುತ್ತಿದೆ ಎಂದರು.
ಇನ್ನು ಅಕ್ರಮ ಎಸಗಿರುವವರ ವಿರುದ್ಧ ಕಠಿಣ ಕ್ರಮ ರೂಪಿಸಿರುವುದರ ಜೊತೆಗೆ ಈ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಕೂಡ ಶಿಕ್ಷೆಗೆ ಗುರಿಪಡಿಸಲಾಗುವುದು. ಇನ್ನು ಈಗಾಗಲೇ ನಮ್ಮ ಭೂಮಿ ಜಲಾಶಯಕ್ಕೆ ಹೋಗಿದೆಯೆಂದು ಬೋಗಸ್ ಪ್ರಮಾಣಪತ್ರವನ್ನು ಕೂಡ ಪಡೆದಿದ್ದು, ನಕಲಿ ಪ್ರಮಾಣಪತ್ರ ಪಡೆದವರ ವಿರುದ್ಧವೂ ಕೂಡ ಕಾನೂನು ತನಿಖೆ ನಡೆಸಲಾಗುವುದು ಎಂದರು.
ಇಂದು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಕ್ಷೇತ್ರದ ಮೂಲಕ ಜಿಲ್ಲೆಯಲ್ಲಿ ಗ್ರಾಮ ಸ್ವರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿ ಗ್ರಾಮೀಣ ಮಟ್ಟದ ಅಭಿವೃದ್ಧಿಗೆ ಚಾಲನೆ ನೀಡಿದ್ದೇವೆ. ಮೊದಲ ಬಾರಿಗೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕೇಂದ್ರದ ನರೇಂದ್ರ ಮೋದಿಯವರ ಕೈ ಬಲಪಡಿಸುವುದು ಪ್ರಮುಖ ಗುರಿಯಾಗಿದೆ. ಇದರೊಂದಿಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಗ್ರಾಮ ಪಂಚಾಯತಿ ಮತ್ತು ಪ್ರತಿ ಹಳ್ಳಿಹಳ್ಳಿಗೂ ತಲುಪಿಸುವ ಕಾರ್ಯ ಮಾಡಲಾಗುವುದು ಎಂದರು.