ಹಾಸನ: ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆಯುವ ಬಿಡ್‌ನಂತೆಯೇ ರಾಜ್ಯದಲ್ಲಿ ಮುಂಬಡ್ತಿ ಹುದ್ದೆಗಳು ಮಾರಾಟವಾಗುತ್ತಿವೆ ಎಂದು ಮಾಜಿ ಸಚಿವ ರೇವಣ್ಣ ಆರೋಪ ಮಾಡಿದರು.
ಮಾಜಿ ಸಚಿವ ರೇವಣ್ಣ ಸುದ್ದಿಗೋಷ್ಠಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ, ರಾಜ್ಯದಲ್ಲಿ ಈಗಾಗಲೇ ವಿವಿಧ ಇಲಾಖೆಗಳ 24 ಮುಖ್ಯ ಅಭಿಯಂತರುಗಳಿಗೆ ಬಡ್ತಿ ನೀಡಲು ಸ್ವತಃ ಮುಖ್ಯಮಂತ್ರಿಗಳೇ ಸಹಿ ಹಾಕಿದ್ದು, ಉಳಿದ 7 ಮಂದಿಗೆ ಆದೇಶ ಪ್ರತಿ ನೀಡದೇ ಒಂದು ಸಮಾಜವನ್ನು ಗುರಿಯಾಗಿಟ್ಟುಕೊಂಡು ಅಧಿಕಾರಿ ವರ್ಗದವರನ್ನು ಮುಗಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಟೀಕಾಪ್ರಹಾರ ಮಾಡಿದರು.
ಡಿ.ಕೆ ಶಿವಕುಮಾರ್ ಒಬ್ಬನೇನಾ ಹಣ ಮಾಡಿರೋದು?
ರಾಜ್ಯದಲ್ಲಿ ಡಿ.ಕೆ ಶಿವಕುಮಾರ್ ಒಬ್ಬರೇನಾ ಹಣ ಮಾಡಿರೋದು? ಬೇರೆ ಸಮಾಜದವರು ಯಾರೂ ಹಣ ಮಾಡಿಲ್ವಾ? ಅವರುಗಳನ್ನ ಏಕೆ ತನಿಖೆಗೆ ಒಳಪಡಿಸಿಲ್ಲ? ನಂಬರ್ 18 ರಿಂದ 24ರ ಸಮಾಜವನ್ನು ಮುಖ್ಯಮಂತ್ರಿಗಳು ಮುಗಿಸಲು ಹೊರಟಿದ್ದಾರೆ ಎನ್ನುವ ಮೂಲಕ 'ಸಮಾಜ'ದ ಹೆಸರುಗಳನ್ನು ಪ್ರಸ್ತಾಪಿಸದೇ ಸಂಖ್ಯೆಗಳ ಮೂಲಕವೇ ಆಕ್ರೋಶ ವ್ಯಕ್ತಪಡಿಸಿದ್ರು.
ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ನೀಡುವ ಕಾರ್ಯ ಮಾಡದೆ, ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವಂತೆ ಅಧಿಕಾರಿಗಳ ವರ್ಗಾವಣೆ, ಮುಂಬಡ್ತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದ್ರು.
ಉತ್ತರಾಧಿಕಾರಿಗಾಗಿ ಸಿದ್ದತೆ:
ಬಿಜೆಪಿಯಲ್ಲಿ 75 ವರ್ಷ ಮೀರಿದ ಹಿರಿಯರಿಗೆ ಯಾವುದೇ ಅಧಿಕಾರ ನೀಡುವುದಿಲ್ಲ ಅಂತ ಮೋದಿ ಮತ್ತು ಅಮಿತ್ ಶಾ ಆದೇಶ ಹೊರಡಿಸಿದ್ದಾರಲ್ಲಾ, ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಇರುವಷ್ಟು ದಿನ ಹಣದ ಲೂಟಿ ಮಾಡಬೇಕು, ಎಲ್ಲವನ್ನು ಮಾಡಿಕೊಂಡು ಮುಂದಿನ ಬಿಜೆಪಿಯ ಉತ್ತರಾಧಿಕಾರಿಯಾಗಿ ವಿಜಯೇಂದ್ರರನ್ನ ರಾಜಕೀಯ ಮುಖ್ಯವಾಹಿನಿಗೆ ತಂದು ಪಟ್ಟಾಭಿಷೇಕ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಅಂತ ವ್ಯಂಗ್ಯವಾಡಿದ್ರು.