ಹಾಸನ: ಕೊರೊನಾ ಹಿನ್ನೆಲೆಯಲ್ಲಿ ಕಷ್ಟದಲ್ಲಿರುವ ಇತರೆ ವರ್ಗದವರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ನೀಡಿರುವಂತೆ ಖಾಸಗಿ ಶಾಲೆಗಳ ಸಿಬ್ಬಂದಿ ವರ್ಗದವರಿಗೂ ನೀಡಬೇಕು ಎಂದು ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಕಾನೂನು ಸಲಹೆಗಾರ ಹೆಚ್.ಕೆ.ಜವರೇಗೌಡ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೋಷಕರಿಂದ ಶಾಲಾ ಶುಲ್ಕ ವಸೂಲಾತಿ ಮಾಡಬಾರದೆಂದು ಆದೇಶಿಸಿರುವ ರಾಜ್ಯ ಸರ್ಕಾರ, ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸದೆ 6ನೇ ವೇತನ ಆಯೋಗದ ಶಿಫಾರಸಿನಂತೆ ಸಂಬಳ ನೀಡಬೇಕೆಂದು ಆದೇಶಿಸಿದೆ. ಇಡೀ ರಾಜ್ಯದಲ್ಲಿ ಸರ್ಕಾರಿ ಶಾಲೆಗಳಿಗಿಂತ 2 ಪಟ್ಟು ಹೆಚ್ಚಾಗಿ ಖಾಸಗಿ ಶಾಲೆಗಳು ಇದ್ದು, ಇದರಲ್ಲಿ ಕೆಲವು ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಅನುದಾನ ನೀಡುತ್ತಿದೆ. ಬಹುತೇಕ ಖಾಸಗಿ ಸಂಸ್ಥೆಗಳು ಅನುದಾನ ರಹಿತವಾಗಿ ಕೆಲಸ ನಿರ್ವಹಿಸುತ್ತಿವೆ ಎಂದರು.