ಹಾಸನ: ಮುನ್ಸಿಪಾಲಿಟಿ ಅಧಿಕಾರಕ್ಕೋಸ್ಕರ ನಾನು ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳಲ್ಲ. ನಮ್ಮನ್ನು ಬಳಸಿಕೊಂಡು ಅವರ ಬೇಳೆ ಬೇಯಿಸಿಕೊಳ್ಳುತ್ತಾರೆ ಎಂದು ಜೆಡಿಎಸ್ ಪಕ್ಷದ ವಿರುದ್ಧ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ವಾಗ್ದಾಳಿ ನಡೆಸಿದರು.
ಜೆಡಿಎಸ್ ವಿರುದ್ಧ ಶಾಸಕ ಪ್ರೀತಮ್ ಗೌಡ್ ವಾಗ್ದಾಳಿ ನಗರದ ಹಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕಾಗಿ ಜೆಡಿಎಸ್ ಜೊತೆ ರಾಜಿಯಾಗಿ, ಅವರ ಮುಲಾಜಿಗೆ ಒಳಗಾಗಿ, ಅವರು ಹೇಳಿದ್ದನ್ನೆಲ್ಲ ಕೇಳುವಂತಹ ಪರಿಸ್ಥಿತಿ ನಮ್ಮ ಪಕ್ಷಕ್ಕಾಗಲೀ, ನಾಯಕರಿಗಾಗಲಿ, ಸಂಘಟನೆಗಾಗಲಿ ಬರಬಾರದು ಎನ್ನುವುದು ನನ್ನ ದಿಟ್ಟ ನಿಲುವು.
ಆರ್ಎಸ್ಎಸ್ ದೇಶವನ್ನು ಕಟ್ಟಲು ಯುವಕರನ್ನು ಬೆಳೆಸುವ ಕಾರ್ಖಾನೆ. ದೇಶ ಕಟ್ಟುವುದೇ ತಪ್ಪು ಎನ್ನುವುದಾದರೆ ಸಾರ್ವಜನಿಕರು ಯೋಚನೆ ಮಾಡಬೇಕಾದ ಸಮಯ ಇದು. ಇದರಲ್ಲಿಯೇ ಯಾರ್ಯಾರ ಮನಸ್ಥಿತಿ ಏನು ಎಂಬುದು ಗೊತ್ತಾಗುತ್ತೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.
ಜೆಡಿಎಸ್ನ್ನು ದೂರವಿಡಬೇಕು: ಇದೇ ವೇಳೆ ಮುಖ್ಯಮಂತ್ರಿ ಸೇರಿದಂತೆ ಸ್ವಪಕ್ಷದ ಕೆಲವು ನಾಯಕರು ಜೆಡಿಎಸ್ ಜೊತೆ ಸಾಫ್ಟ್ ಕಾರ್ನರ್ ಹೊಂದಿರುವ ಬಗ್ಗೆಯೂ ವಿರೋಧಿಸಿದ ಅವರು, ಬಿಜೆಪಿ ಯಾವುದೋ ಒಂದು ಭಾಗದಲ್ಲಿ ಅಧಿಕಾರ ಹಿಡಿಯಲು ಸಾಫ್ಟ್ ಕಾರ್ನರ್ ತೋರಿಸಿದೆ.
ಜೆಡಿಎಸ್ ಅನ್ನು ರಾಜಕೀಯವಾಗಿ ಒಂದು ಮೈಲಿ, ಒಂದು ಕಿಲೋಮೀಟರ್, ಒಂದು ಮೀಟರ್ ದೂರ ಇಡಬೇಕು. ನಮ್ಮನ್ನು ಬಳಸಿಕೊಂಡು ಅವರ ಬೇಳೆ ಬೇಯಿಸಿಕೊಳ್ಳುತ್ತಾರೆ. ಕಲಬುರಗಿಯಲ್ಲಿ ಅಧಿಕಾರ ಹಿಡಿಯಲು ಅವರನ್ನು ಓಲೈಕೆ ಮಾಡಲು ಹೋದ್ರೆ ನಮ್ಮ ಬುಡಕ್ಕೆ ಬರುತ್ತೆ. ಅಧಿಕಾರ ಹಿಡಿಯಲು ಐದಲ್ಲ ಹತ್ತು ವರ್ಷ ಕಾಯೋಣ ಎಂದರು.
ಪ್ರೀತಂಗೌಡ ಒಬ್ಬರೇ ನೇರವಾಗಿ ಮಾತಾಡ್ತಾರೆ: ಜೆಡಿಎಸ್ ಮಿಷನ್ ಏನು ಅಂದ್ರೆ ಬಿಜೆಪಿ - ಕಾಂಗ್ರೆಸ್ ನೂರು ಸ್ಥಾನ ಗೆಲ್ಲಬಾರದು. ಆಗ ಯಾವ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳೋದು ಎಂಬುದನ್ನು ಅವರು ಯೋಜನೆ ಮಾಡ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಬೇರೆಯವರು ಈ ಬಗ್ಗೆ ಮಾತನಾಡಲ್ಲ ಪ್ರೀತಂಗೌಡ ಒಬ್ಬನೇ ನೇರವಾಗಿ ಮಾತನಾಡುತ್ತಾನೆ ಎಂದು ಜೆಡಿಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.