ಹಾಸನ: ನಗರಸಭೆ ಸದಸ್ಯ ಪ್ರಶಾಂತ್ ಕೊಲೆ ಪ್ರಕರಣ ನಿಜಕ್ಕೂ ದುಃಖದ ಸಂಗತಿ. ಒಬ್ಬ ಜನಪ್ರತಿನಿಧಿಯಾಗಿ ಮತ್ತೊಬ್ಬ ಜನಪ್ರತಿನಿಧಿಯ ಕೊಲೆ ಊಹೆ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಸದ್ಯದಲ್ಲೇ ಅವರ ಕುಟುಂಬದ ಸದಸ್ಯರನ್ನ ಭೇಟಿ ಮಾಡಿ ಸಾಂತ್ವನ ಹೇಳುತ್ತೇನೆ. ಜೊತೆಗೆ ಪ್ರಕರಣದ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಪೊಲೀಸರಿಗೆ ಸೂಚನೆ ನೀಡುತ್ತೇನೆ ಎಂದು ಹಾಸನದ ಶಾಸಕ ಪ್ರೀತಂ ಗೌಡ ಒತ್ತಾಯಿಸಿದರು.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನಾನು ಎಂದಿಗೂ ಸಹ ಸಾವಿನ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ, ನನ್ನ ಮತ್ತು ಪ್ರಶಾಂತ್ ನಡುವೆ ಒಳ್ಳೆಯ ಬಾಂಧವ್ಯವಿತ್ತು. ಅವರ ಸಾವು ನನಗೂ ನೋವು ತಂದಿದೆ. ಅವರ ಬಗ್ಗೆ ಯಾವುದೇ ಪಕ್ಷದಲ್ಲೂ ನೆಗೆಟಿವ್ ಟಾಕ್ ಇರಲಿಲ್ಲ. ಮೊದಲು ಅವರು ಬೇರೆ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಆ ನಂತರ ಜೆಡಿಎಸ್ ಪಕ್ಷಕ್ಕೆ ಹೋಗಿದ್ದರು. ಯಾರು ಯಾವ ಪಾರ್ಟಿಗಾದರೂ ಹೋಗಬಹುದು. ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುವುದು ನನ್ನ ಕೆಲಸ ಎಂದು ಪರೋಕ್ಷವಾಗಿ ರೇವಣ್ಣನ ಮಾತಿಗೆ ಪ್ರತ್ಯುತ್ತರ ನೀಡಿದರು.