ಹಾಸನ:ಮನನೊಂದು ಆತ್ಮಹತ್ಯೆಗೆ ಶರಣಾದ ಯುವತಿಯ ಮರಣೋತ್ತರ ಪರೀಕ್ಷೆ ವರದಿ ನೀಡದೆ ಹಾಸನ ಜಿಲ್ಲಾಸ್ಪತ್ರೆ ವೈದ್ಯರು ತಮ್ಮ ಎದುರುದಾರ ವಕೀಲರೊಂದಿಗೆ ಶಾಮೀಲಾಗಿದ್ದಾರೆ ಎಂದು ಯುವತಿಯ ಮಾವ ತಿಮ್ಮೇಗೌಡ ಆರೋಪಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ನೀಡಲು ವಿಳಂಬ: ಮೃತ ಯುವತಿಯ ಪೋಷಕರ ಆಕ್ರೋಶ - ಹಾಸನ ಕ್ರೈಂ
ಮನನೊಂದು ಆತ್ಮಹತ್ಯೆಗೆ ಶರಣಾದ ಯುವತಿಯ ಮರಣೋತ್ತರ ಪರೀಕ್ಷೆಯ ವರದಿಯನ್ನು ಇನ್ನೂ ನೀಡಿಲ್ಲ. ಪರೀಕ್ಷೆ ನಡೆಸಿದ ವೈದ್ಯ ಆರೋಪಿಗಳ ಪರ ವಕೀಲರೊಂದಿಗೆ ಶಾಮೀಲಾಗಿದ್ದಾರೆ ಎಂದು ಯುವತಿಯ ಮಾವ ಆರೋಪಿಸಿದ್ದಾರೆ.
ಹಾಸನ ತಾಲೂಕಿನ ಅದ್ದಿಹಳ್ಳಿಯಲ್ಲಿ ಆಗಸ್ಟ್ 21 ರಂದು ಯುವತಿಯೋರ್ವಳು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಯುವತಿಯ ಪೋಷಕರು, ಗ್ರಾಮದ ಯುವಕನೊಬ್ಬ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಇದರಿಂದ ಆಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆರೋಪ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಹಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಕೂಡ ನಡೆಸಲಾಗಿದೆ. ಆದರೆ ಆರೋಪಿಯ ಪರ ವಾದ ಮಾಡುತ್ತಿರುವ ವಕೀಲರ ಸಹೋದರನೇ ವೈದ್ಯರಾಗಿದ್ದು ಅವರೇ ಯುವತಿಯ ಮರಣೋತ್ತರ ಪರೀಕ್ಷೆ ಮಾಡಿದ್ದಾರೆ. ಆರೋಪಿ ಪರ ವಕೀಲರು ಪ್ರಭಾವ ಬೀರಿದ್ದರಿಂದ ಒಂದು ವಾರ ಕಳೆದರೂ ಮರಣೋತ್ತರ ಪರೀಕ್ಷೆ ವರದಿ ನೀಡಿಲ್ಲ. ಪರೀಕ್ಷೆ ಮಾಡಿದ ಎರಡು ದಿನಗಳಲ್ಲಿ ವರದಿ ನೀಡುತ್ತಾರೆ. ಆದರೆ ಈ ಪ್ರಕರಣದಲ್ಲಿ ಆರೋಪಿಯೊಂದಿಗೆ ವೈದ್ಯರು ಶಾಮೀಲಾಗಿರುವ ಅನುಮಾನವಿದೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ.