ಹಾಸನ: ರಿಯಲ್ ಎಸ್ಟೇಟ್ ಉದ್ಯಮಿಯನ್ನ ಮಾರಕಾಸ್ತ್ರಗಳಿಂದ ಕೊಲೆಗೈದಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಮತ್ತು ಹಿರಿಸಾವೆ ನಡುವಿನ ಕುಮಾರವಳ್ಳಿ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ.
ಲಿಂಗರಾಜು (43) ಮೃತ ವ್ಯಕ್ತಿಯಾಗಿದ್ದು, ಬೆಂಗಳೂರಿನ ಶಾಂತಿನಗರದ ರೌಡಿಶೀಟರ್ ಎಂದು ಗುರುತಿಸಲಾಗಿದೆ. ಎಂಟು ಮಂದಿ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಹತ್ಯೆ ಯಾರು ಈ ಲಿಂಗರಾಜು?
ಲಿಂಗರಾಜು ಮೂಲತಃ ಹಾಸನ ಜಿಲ್ಲೆ ನಿವಾಸಿ. ಬೆಂಗಳೂರಿನ ಶ್ರೀನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಕೊರೊನಾ ಲಾಕ್ಡೌನ್ ಸಮಯದಲ್ಲಿ ಸ್ವಗ್ರಾಮಕ್ಕೆ ಮರಳಿ ತೋಟದ ಮನೆಯಲ್ಲಿ ವಾಸವಾಗಿದ್ದನಂತೆ. ಡಿಸೆಂಬರ್ 8ರಂದು ಮಧ್ಯಾಹ್ನ ತನ್ನ ಸ್ನೇಹಿತರೊಂದಿಗೆ ಮನೆಯಲ್ಲಿ ಊಟ ಮಾಡಿ ವಿಶ್ರಾಂತಿ ಪಡೆದಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಓದಿ: ಅಪ್ರಾಪ್ತನಿಂದ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಸಾಗರದಲ್ಲಿ ಪೊಕ್ಸೊ ಪ್ರಕರಣ ದಾಖಲು
ಕಳೆದ ರಾತ್ರಿ 7.30ರ ಸುಮಾರಿಗೆ ಮನೆಯ ಬಾಗಿಲು ಜೋರಾಗಿ ಬಡಿದ ಶಬ್ದ ಕೇಳಿಸಿದೆ. ಈ ವೇಳೆ ಲಿಂಗರಾಜು ಸಹೋದರನ ಮಗ ಸುದರ್ಶನ್ ಹೊರಗೆ ಬಂದು ನೋಡಿದಾಗ 8 ಜನ ಕಾರು ಮತ್ತು ಬೈಕ್ನಲ್ಲಿ ಕೂಗಾಡಿಕೊಂಡು ಹೋಗುವುದನ್ನು ಗಮನಿಸಿದ್ದಾನೆ. ನಂತರ ಮನೆಯೊಳಗೆ ಬಂದು ನೋಡಿದಾಗ ಚಿಕ್ಕಪ್ಪನ ಬರ್ಬರ ಕೊಲೆಯಾಗಿತ್ತು. ಕೊಲೆಗಾರರು ಯಾವುದೇ ಸುಳಿವು ದೊರಕದಂತೆ ಮನೆಯಲ್ಲಿದ್ದ ಸಿಸಿಟಿವಿಯ ಡಿವಿಆರ್ ಹೊತ್ತೊಯ್ದಿದ್ದಿದ್ದಾರೆ.
ಮೃತದೇಹವನ್ನು ಹಾಸನದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಹಿರಿಸಾವೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.