ಹಾಸನ:ಮುಖ್ಯಮಂತ್ರಿಗಳು ಸಭೆ ಕರೆದ ವೇಳೆ ಗುತ್ತಿಗೆದಾರ ಅಸೋಸಿಯೇಷನ್ ಇಡೀ ರಾಜ್ಯಕ್ಕೆ 40 ಪರ್ಸೆಂಟ್ ಸರ್ಕಾರ ಎಂದು ಹೇಳಿದರು. ನಾನಾಗಲೀ, ಕುಮಾರಣ್ಣ ಆಗಲಿ ಅಥವಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗಲಿ 40 ಪರ್ಸೆಂಟ್ ಸರ್ಕಾರ ಅಂತಾ ಹೇಳಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಸ್ಪಷ್ಟನೆ ನೀಡಿದರು.
ನಗರದ ಜವೇನಹಳ್ಳಿ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಮಟ್ಟಕ್ಕೆ 40 ಪರ್ಸೆಂಟ್ ಸರ್ಕಾರ ಎಂದು ಗೊತ್ತಾಗಿದೆ. ಇಂತಹ ಆರೋಪಗಳನ್ನು ಅಧಿಕಾರಿಗಳು ಹಣ ಪಡೆದು ಸರ್ಕಾರದ ಮೇಲೆ ಮಾಡುತ್ತಿರಬೇಕು. ಇಲ್ಲವೇ ಸರ್ಕಾರ ಹಣ ಪಡೆದು ಅಧಿಕಾರಿಗಳ ಮೇಲೆ ಆರೋಪ ಮಾಡುತ್ತಿರಬೇಕು ಎಂದರು.
ಆರ್ಎಸ್ಎಸ್ & ಭಜರಂಗದಳವನ್ನೂ ಬ್ಯಾನ್ ಮಾಡಲಿ: ಚುನಾವಣೆ ಗಿಮಿಕ್ಗಾಗಿ ಪಿಎಫ್ಐ ಮತ್ತು ಎಸ್ಡಿಪಿಐ ಬ್ಯಾನ್ ಮಾಡಲಾಗಿದೆ. ಬ್ಯಾನ್ ಮಾಡುವುದಾದರೇ ಆರ್ಎಸ್ಎಸ್ ಹಾಗೂ ಭಜರಂಗದಳ ಸೇರಿ ಒಟ್ಟಿಗೆ ಎಲ್ಲ ಸಂಘಟನೆಗಳನ್ನು ಬ್ಯಾನ್ ಮಾಡಲಿ ಎಂದು ಸಂಸದ ಪ್ರಜ್ವಲ್ ರೇವಣ್ಣ ಬಿಜೆಪಿ ವಿರುದ್ಧ ಹರಿಹಾಯ್ದರು.
ಸಮಾಜದಲ್ಲಿ ಮತ್ತೊಮ್ಮೆ ಗೊಂದಲ ಸೃಷ್ಠಿ ಮಾಡಿ ನೀವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದೀರಿ. ಸರ್ಕಾರಗಳು ಇದಕ್ಕೆ ತುರ್ತು ನಿರ್ಧಾರ ತೆಗೆದುಕೊಳ್ಳಬೇಕು. ಎಲ್ಲಾ ಹಿರಿಯರ ಮಾರ್ಗದರ್ಶನದಲ್ಲಿ ಸಮಸ್ಯೆ ಬಗ್ಗೆ ಚರ್ಚಿಸಬೇಕು. ತಪ್ಪು ಎಲ್ಲಾಗಿದೆ?, ದೇಶದ್ರೋಹ ಕೆಲಸಕ್ಕೆ ದಾಖಲಾತಿ ಏನಿದೆ?, ಸಾಕ್ಷಿಯನ್ನು ಜನರ ಮುಂದೆ ಇಟ್ಟು ನಂತರ ಬ್ಯಾನ್ ಮಾಡಿ ಎಂದು ಆಗ್ರಹಿಸಿದರು.
ಚುನಾವಣೆ ಗಿಮಿಕ್:ಚುನಾವಣೆ ಸಮೀಪಿಸುತ್ತಿರುವುದರಿಂದ ಬ್ಯಾನ್ ಮಾಡುತ್ತಿದ್ದಾರೆ. ಪಿಎಫ್ಐ ಮತ್ತು ಎಸ್ಡಿಪಿಐ ನಿನ್ನೆ ಮೊನ್ನೆ ಹುಟ್ಟಿದಲ್ಲ. ಹಲವಾರು ವರ್ಷಗಳಿಂದ ಇದ್ದು, ಬ್ಯಾನ್ ಮಾಡುವುದಾದರೇ ಸರ್ಕಾರ ಬಂದ ಮೂರು ವರ್ಷಗಳಲ್ಲೇ ಬ್ಯಾನ್ ಮಾಡಬಹುದಿತ್ತು. ಇಷ್ಟೊಂದು ಸಮಯ ಬೇಕಾಗಿರಲಿಲ್ಲ. ಇದೆಲ್ಲ ಚುನಾವಣೆಯ ಗಿಮಿಕ್ ಅಲ್ಲದೇ ಇನ್ನೇನು? ಎಂದು ಪ್ರಶ್ನಿಸಿದರು.
ಇನ್ನು, ಜವೇನಹಳ್ಳಿ ಮಠಕ್ಕೆ ದೇವೇಗೌಡರು, ರೇವಣ್ಣ ಕೂಡ ಭಕ್ತರು. ಹಾಗಾಗಿ ನಾನು ಕೂಡ ಅದನ್ನು ಮುಂದುವರೆಸಿಕೊಂಡು ಹೋಗಬೇಕು. ಈ ಮಠದಲ್ಲಿ ತನ್ನದೆಯಾದ ಶಕ್ತಿ ಮತ್ತು ಶ್ರೀಗಳ ಆಶೀರ್ವಾದ ಸದಾ ಕಾಲ ನಮ್ಮ ಮೇಲೆ ಇರಲಿ ಎನ್ನುವ ಭಾವನೆಯಿಂದ ಇಲ್ಲಿಗೆ ಬಂದಿದ್ದೇನೆ. ಇಲ್ಲಿನ ಸ್ವಾಮೀಜಿಗಳು ಮಠದ ಬಗ್ಗೆ ತಿಳಿಸಲಿಲ್ಲ. ಆದರೆ ಭಕ್ತಾಧಿಗಳು ಹೇಳಿದ ವೇಳೆ ನಾನೇ ಶ್ರೀಗಳಿಗೆ ಮನವಿ ಮಾಡಿಕೊಂಡು ಮಠಕ್ಕೆ ಬರುವುದಾಗಿ ಹೇಳಿದ್ದೆ. ಇಲ್ಲಿ ಏನೇ ಅಭಿವೃದ್ಧಿ ಇದ್ದಲ್ಲಿ ಮಾಡಿಸಿಕೊಡಲಾಗುವುದು ಎಂದು ಸಂಸದ ಪ್ರಜ್ವಲ್ ರೇವಣ್ಣ ಭರವಸೆ ನೀಡಿದರು.
ಈ ಮಠದಿಂದ ಬಹಳಷ್ಟು ಜನರಿಗೆ ಒಳ್ಳೆಯದಾಗಿದೆ. ನಗರ ಸಭೆ ಕಮಿಷನರ್ಗೆ ಹೇಳಿ ನಗರ ಸಭೆಯಿಂದ ಕಲ್ಯಾಣಿಯನ್ನು ಸ್ವಚ್ಛತೆ ಮಾಡುವ ಕೆಲಸ ಮಾಡಲಾಗುವುದು. ಹಿಂದೆ ಬಂದಾಗ ಕಲ್ಯಾಣಿ ಹಾಳಾಗಿತ್ತು. ಈಗ ನೀರಿದೆ. ಪೂರ್ಣ ನೀರನ್ನು ಹೊರ ಹಾಕಿದ ನಂತರ ಮುಂದಿನ ಕೆಲಸ ಮಾಡಬೇಕಾಗಿದೆ. ಈ ಕಲ್ಯಾಣಿಯ ಆಳ ಎಷ್ಟಿದೆ ಎಂಬುದು ಇನ್ನೂ ಸರಿಯಾಗಿ ಯಾರಿಗೂ ತಿಳಿದಿಲ್ಲ. ಇಂಜಿನಿಯರ್ಗಳನ್ನು ಕರೆಯಿಸಿ ಅಂದಾಜು ಮಾಡಿ ನಂತರ ಕಲ್ಯಾಣಿಯನ್ನು ಸ್ವಚ್ಛ ಮಾಡಲಾಗುವುದು ಎಂದರು.
ಇದನ್ನೂ ಓದಿ:ಅವರಪ್ಪ ದುಡ್ಡು ಮಾಡಿದ್ದಕ್ಕೆ ಮಗ ಇಲ್ಲಿ ಎಗ್ರಾಡ್ತಿದ್ದಾನೆ: ಶಾಸಕ ಪ್ರೀತಂ ಗೌಡ ವಿರುದ್ಧ ಪ್ರಜ್ವಲ್ ರೇವಣ್ಣ ಕಿಡಿ