ಹಾಸನ :ಶ್ರೀರಾಮನ ಹೆಸರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರಬಹುದು. ಆದರೆ, ಮುಂದೆ ಅದೇ ಶ್ರೀರಾಮ ಅವರನ್ನು ಬಲಿ ತೆಗೆದುಕೊಳ್ಳುತ್ತಾನೆ. ಇವರ ಸರ್ಕಾರ ಹೆಚ್ಚು ದಿನ ಇರುವುದಿಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಸಂಸದ ಡಿ ಕೆ ಸುರೇಶ್ ಆಕ್ರೋಶ ಬೆಲೆ ಏರಿಕೆ ಹಾಗೂ ಇಂಧನ ಏರಿಕೆ ವಿರುದ್ಧ ಹಾಸನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಬಳಿಕ ಮಾತನಾಡಿದ ಅವರು, ಸುಪ್ರೀಂಕೋರ್ಟ್ ನಿರ್ದೇಶನದಂತೆ ಈಗಾಗಲೇ ರಾಮ ಮಂದಿರ ನಿರ್ಮಾಣಕ್ಕೆ ಕಮಿಟಿ ರಚನೆ ಮಾಡಲಾಗಿದೆ. ಯಾರೋ ಒಬ್ಬರಿಗೆ ಆ ಕಾಮಗಾರಿಯನ್ನು ನೀಡುವುದಕ್ಕಾಗಿ ಭೂಮಿಯನ್ನು ಖರೀದಿ ಮಾಡಿದ ಅಗ್ರಿಮೆಂಟ್‌ನ ಕೇವಲ ಅರ್ಧ ಗಂಟೆಯಲ್ಲಿ ಎರಡು ಬಾರಿ ಬದಲಾವಣೆ ಮಾಡಿಕೊಡಲಾಗಿದೆ ಎಂದು ಆರೋಪಿಸಿದರು.
ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಬಂದಿಲ್ಲ. ಬದಲಿಗೆ ಅವರ ಪಕ್ಷದ ಆಂತರಿಕ ಕಚ್ಚಾಟ, ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡಲು ಬಂದಿದ್ದಾರೆ. ಇದು ನಾಚಿಕೆಗೇಡಿನ ಕೆಲಸ ಎಂದು ಟೀಕಿಸಿದರು. ಇನ್ನು, ಬಿಜೆಪಿಯ ಆಂತರಿಕ ಕಚ್ಚಾಟದಿಂದ ನಮಗೆ ಮುಂದಿನ ದಿನ ಅನುಕೂಲವಾಗುವುದಕ್ಕಿಂತ ನಮ್ಮ ರಾಜ್ಯದ ಜನರ ಪ್ರಾಣ ಮುಖ್ಯ.
ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಅಧಿಕಾರದ ಆಸೆ ಇಲ್ಲ. ರಾಜ್ಯದ ಜನರ ತೆರಿಗೆ ಹಣವನ್ನು ದುರುಪಯೋಗ ಮಾಡಿಕೊಳ್ಳದೆ ಸಂಕಷ್ಟದಲ್ಲಿರುವ ಪ್ರತಿ ರೈತ ಕುಟುಂಬಕ್ಕೆ ₹10 ಸಾವಿರ ನೀಡಬೇಕೆಂದು ಒತ್ತಾಯಿಸುತ್ತೇನೆ ಎಂದರು.
ಓದಿ:ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಹೀಗಿದೆ ಮಾದರಿ ಪ್ರಶ್ನೆ ಪತ್ರಿಕೆ