ಹಾಸನ: ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುತ್ತಿರುವವರ ಬಗ್ಗೆ ಶಾಸಕ ಕೆ.ಎಂ ಶಿವಲಿಂಗೇಗೌಡ ಕಿಡಿ ಕಾರಿದ್ದು, ದುಡಿಯಲು ಬೇರೆಲ್ಲಿಗೋ ಹೋಗಿ ಈಗ ಅಲ್ಲಿ ಬದುಕಲು ಆಗದೆ ಇಲ್ಲಿಗೆ ಬರುತ್ತಿದ್ದಾರೆ. ಅಲ್ಲಿ ಸೋಂಕು ಅಂಟಿಸಿಕೊಂಡು ಬಂದು ನಮ್ಮನ್ನೂ ಸಾಯಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಾಸನದ ಜಿಲ್ಲಾ ಪಂಚಾಯತಿಯಲ್ಲಿ ನಡೆದ ಆರೋಗ್ಯ ಇಲಾಖೆಯ ಕೊರೊನಾ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 48 ದಿನಗಳಿಂದ ಹಾಸನ ಜಿಲ್ಲೆ ಹಸಿರು ವಲಯದಲ್ಲಿ ಇತ್ತು. ಆದರೆ, ಕರ್ನಾಟಕದಲ್ಲಿ ಬದುಕಲು ಸಾಧ್ಯವಿಲ್ಲ ಅಂತ ಮುಂಬಯಿಯಲ್ಲಿ ಬ್ರೆಡ್ ಮಾಡುವುದಕ್ಕೆ ಹೋಗಿ ಅಲ್ಲಿಂದ ಕೊರೊನಾ ಅಂಟಿಸಿಕೊಂಡು ಬಂದು ಇಲ್ಲಿ ನಮ್ಮನ್ನು ಸಾಯಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಯಮಾಡಿ ನಾನು ಮನವಿ ಮಾಡೋದು ಇಷ್ಟೇ, ಹೊರರಾಜ್ಯದಿಂದ ಬರುವವರಿಗೆ ನಮ್ಮ ರಾಜ್ಯಕ್ಕೆ ಬರಲು ಅವಕಾಶ ಕೊಡಬೇಡಿ. ಕಳೆದ 25 ವರ್ಷಗಳಿಂದ ಮುಂಬೈನಲ್ಲೇ ವಾಸ ಇದ್ದು, ಈಗ ಹಾಸನ ಜಿಲ್ಲೆ ಸೇಫ್ ಎಂದು ಭಾವಿಸಿ ಬರುತ್ತಿದ್ದಾರೆ. ಅವರು ಎಲ್ಲಿದ್ದಾರೋ ಅಲ್ಲಿಯೇ ಬದುಕು ಸಾಗಿಸಲಿ. ಇಲ್ಲಿ ಬಂದು ನಮ್ಮನ್ನು ಸಾಯಿಸುವುದು ಬೇಡ ಎಂದರು.
ನಮಗೆ ಹೊರ ರಾಜ್ಯದವರ ಸಹವಾಸವೇ ಬೇಡ. ಅವರ ಜೀವನ ಅಲ್ಲಿ ಉತ್ತಮವಾಗಿದೆ. ಅವರು ಬಂದರೆ ನಮಗೆ ಜೀವ ಭಯ ಉಂಟಾಗುತ್ತೆ. ನಮ್ಮ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣ ನಿಯಂತ್ರಣಕ್ಕೆ ಬರಬೇಕು ಎಂದರೆ ಅವರಿಗೆ ಅವಕಾಶ ನೀಡಬಾರದು. ಮೋದಿಯವರು ಯಾವ ದೃಷ್ಟಿಯಿಂದ ಈ ಬಗ್ಗೆ ಅವಕಾಶ ನೀಡಿದರೋ ನನಗೆ ಗೊತ್ತಿಲ್ಲ. ಆದರೆ, ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳೇ ಸುಪ್ರೀಂ. ಹಾಗಾಗಿ ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ, ಗುಜರಾತ್ ಇತರ ರಾಜ್ಯಗಳಿಂದ ಬರುವವರಿಗೆ ಅವಕಾಶ ಕಲ್ಪಿಸಿ ಕೊಡಬಾರದು ಎಂದು ಆಗ್ರಹಿಸಿದರು.