ಅರಕಲಗೂಡು: ಶಾಸಕ ಎ.ಟಿ. ರಾಮಸ್ವಾಮಿರವರು ಅರಕಲಗೂಡು ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಕೊರೊನಾ ಟಾಸ್ಕ್ ಫೋರ್ಸ್ ಕಮಿಟಿಯ ತುರ್ತು ಸಭೆ ನಡೆಸಿದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕಿನ ಎರಡನೇ ಅಲೆ ಪ್ರಾರಂಭವಾಗಿದೆ. ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಮದುವೆ ಸಮಾರಂಭಕ್ಕೆ ಕೇವಲ 500ರಷ್ಟು ಜನ ಸೇರಬೇಕು. ಕಚೇರಿ, ಸಂಘ ಸಂಸ್ಥೆಗಳ ಸಭೆಗಳಲ್ಲಿ 200 ಜನ, ಶವಸಂಸ್ಕಾರ ಸೇರಿದಂತೆ ಮುಂತಾದ ಕಾರ್ಯಗಳಲ್ಲಿ 100 ಜನ ಸೇರಲು ಅವಕಾಶ ಕಲ್ಪಿಸಲಾಗಿದೆ. ಇದನ್ನು ಎಲ್ಲರೂ ಸರಿಯಾಗಿ ಪಾಲಿಸಬೇಕು ಎಂದರು.
ಅದರಂತೆ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ಕಾರ್ಯಪಡೆ ರಚಿಸಿ ಕೆಲಸ ನಿರ್ವಹಿಸಬೇಕು. ಕಲ್ಯಾಣ ಮಂಟಪದ ಮಾಲೀಕರನ್ನು ಕರೆದು ಸೂಕ್ತ ಸೂಚನೆ ನೀಡಬೇಕು. ನೋಡಲ್ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಜನರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡದೆ 60 ವರ್ಷ ಮೇಲ್ಪಟ್ಟ 45 ದಾಟಿದ ಎಲ್ಲರಿಗೂ ಲಸಿಕೆ ಪಡೆದುಕೊಳ್ಳಲು ಅರಿವು ಮೂಡಿಸಬೇಕು. ಅಡ್ಡ ಪರಿಣಾಮ ಬೀರುತ್ತದೆ ಎಂಬ ಗಾಳಿ ಸುದ್ದಿಯನ್ನು ನಿವಾರಣೆ ಮಾಡಿ ಲಸಿಕೆ ಪಡೆಯಲು ಪ್ರೇರೇಪಿಸಿ ಸೋಂಕು ಹರಡುವಿಕೆ ಮತ್ತು ಸಾವು ತಡೆಗಟ್ಟಬೇಕು. ಬೇರೆ ರೀತಿಯಲ್ಲಿ ಸಾವಾದರೆ ಅದನ್ನು ಕೊರೊನಾ ಎಂದು ನಮೂದು ಮಾಡಬಾರದು ಎಂದರು.
ಸಭೆಯಲ್ಲಿ ತಹಶೀಲ್ದಾರ್ ವೈ.ಎಂ, ರೇಣುಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಸತ್ಯನಾರಾಯಣ, ಸಮಾಜ ಕಲ್ಯಾಣ ಅಧಿಕಾರಿ ಲಿಂಗರಾಜು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಿವಕುಮಾರ್, ಜಿಲ್ಲಾ ಪಂಚಾಯಿತಿ ಎಇಇ ದಿನೇಶ್, ಕಂದಾಯ ಅಧಿಕಾರಿ ಶಿವಕುಮಾರ್, ಸಿಡಿಪಿಒ ಹರಿಪ್ರಸಾದ್, ಆಡಳಿತ ವೈದ್ಯಾಧಿಕಾರಿ ದೀಪಕ್, ತಾಲೂಕು ವೈದ್ಯಾಧಿಕಾರಿ ಸ್ವಾಮಿಗೌಡ, ಮುಂತಾದವರು ಉಪಸ್ಥಿತರಿದ್ದರು.