ಹಾಸನ: ಬರಗೂರು ರಾಮಚಂದ್ರಪ್ಪ ಪಠ್ಯಪುಸ್ತಕ ಪರಿಷ್ಕರಣೆ ಸಮಯದಲ್ಲಿ ಉನ್ನೀಕೃಷ್ಣನ್, ಮೈಸೂರು ಮಹಾರಾಜರು, ಕೆಂಪೇಗೌಡರು ಸೇರಿದಂತೆ ಕುವೆಂಪು ಅಧ್ಯಾಯ ತೆಗೆದಿದ್ದಾರೆ. ಇದಕ್ಕೆ ಕಾಂಗ್ರೆಸ್ನಲ್ಲಿ ಉತ್ತರವಿಲ್ಲ. ಕಾಂಗ್ರೆಸ್ಗೆ ಟಿಪ್ಪು ಸುಲ್ತಾನ್ ಪಠ್ಯ ತೆಗೆದಿದ್ದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಆದಕ್ಕೆ ಈ ರೀತಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಲ್ಲಾ, ಜೀಸಸ್ ಬಗ್ಗೆ ಮಾತ್ರ ಮಕ್ಕಳಿಗೆ ಹೇಳಿಕೊಟ್ಟರು. ಪಠ್ಯದಲ್ಲಿ ಇಲ್ಲದ ಸಾಹಿತಿಗಳು ತಮ್ಮ ಪಠ್ಯ ತೆಗೆಯಲು ಪತ್ರ ಬರೆದು ದೊಡ್ಡ ಸುದ್ದಿ ಮಾಡಿಕೊಂಡರು. ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾದಾಗ ಪ್ರಶಸ್ತಿ ವಾಪಸ್ ಪಡೆಯುವುದಾಗಿ ಹೇಳಿದರು. ಆದರೆ ಯಾರೂ ವಾಪಸ್ ಪಡೆಯಲಿಲ್ಲವಲ್ಲ ಎಂದು ಕುಟುಕಿದರು.
ಪಠ್ಯಪುಸ್ತಕ ಪರಿಷ್ಕೃತ ಸಮಿತಿ ಮುಗಿದಿದೆ. ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಲಾಗುವುದು. ಬಸವಣ್ಣನವರ ಪಾಠ ಬಿಟ್ಟಿದ್ದರೆ ಅದನ್ನು ಸೇರ್ಪಡೆ ಮಾಡಿಸಲು ಪ್ರಯತ್ನ ಮಾಡಲಾಗುವುದು. ಪಠ್ಯಪುಸ್ತಕ ಪರಿಷ್ಕರಣೆಯಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ನಷ್ಟವುಂಟಾಗುವುದಿಲ್ಲ. ಆದರೆ, ವಿರೋಧ ಪಕ್ಷ ಹಿಂದೂ ಸಮಾಜ ಒಡೆಯಲು ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ಕೈಗೆತ್ತಿಕೊಂಡಿದೆ. ಹಿಂದಿನಿಂದಲೂ ಹಿಂದೂ ಸಮಾಜ ಒಡೆದು ಒಂದು ಸಮುದಾಯ ಓಲೈಕೆ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು.