ಹಾಸನ :ಹೆಲಿಕಾಪ್ಟರ್ನಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದು, ಪೊಲೀಸರ ಕೈಯಲ್ಲಿ ಲಾಠಿ ಏಟು ತಿಂದ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದ ನುಗ್ಗೆಹಳ್ಳಿಯಲ್ಲಿ ನಡೆದಿದೆ.
ನುಗ್ಗೆಹಳ್ಳಿ ಗ್ರಾಮದಲ್ಲಿ ದೇವಾಲಯ ಉದ್ಘಾಟನಾ ಸಮಾರಂಭಕ್ಕೆ ಹೆಲಿಕಾಪ್ಟರ್ ಮೂಲಕ ಸಿದ್ದರಾಮಯ್ಯ ಆಗಮಿಸಿದ್ದರು. ಗ್ರಾಮದ ಶಾಲಾ ಮೈದಾನದ ಆವರಣದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ಈ ಸಂದರ್ಭದಲ್ಲಿ ಹೆಲಿಕಾಪ್ಟರ್ನಲ್ಲಿರುವ ಸಿದ್ದರಾಮಯ್ಯರನ್ನು ನೋಡಲು ಅವರ ಅಭಿಮಾನಿಗಳು ಮುಗಿಬಿದ್ದರು.
ಸಿದ್ದರಾಮಯ್ಯರನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು, ಪೊಲೀಸರಿಂದ ಲಘು ಲಾಠಿ ಪ್ರಹಾರ.. ಇದರಿಂದ ಹೆಲಿಕಾಪ್ಟರ್ ಇಳಿಸಲು ತೊಂದರೆಯಾಯಿತು. ಜನ ದೂರ ಸರಿಯಲಿ ಎಂದು ಪೈಲೆಟ್ ಎರಡು ಬಾರಿ ಹೆಲಿಕಾಪ್ಟರ್ನ ಮೇಲೆ ಕೆಳಗೆ ಹಾರಿಸಿದರೂ ಸಹ ಹೆಲಿಪ್ಯಾಡ್‌ನಿಂದ ಜನ ದೂರ ಸರಿಯಲಿಲ್ಲ. ಕೊನೆಗೆ ಜನರನ್ನು ನಿಯಂತ್ರಿಸಲು ಪೊಲೀಸರು ಅನ್ಯಮಾರ್ಗವಿಲ್ಲದೆ ಲಘು ಲಾಠಿ ಪ್ರಹಾರ ಮಾಡಬೇಕಾಯಿತು.
ನಂತರ ಸುಮಾರು ಐದು ನಿಮಿಷ ಹೆಲಿಕಾಪ್ಟರ್‌ನಿಂದ ಇಳಿಯದೇ ಸಿದ್ದರಾಮಯ್ಯನವರು ಅಲ್ಲಿಯೇ ಕುಳಿತಿದ್ರು. ಕೊನೆಯವರೆಗೂ ಹಿಂದೆ ಸರಿಯದ ಜನರನ್ನ ಗಮನಿಸಿದ ಸಿದ್ದರಾಮಯ್ಯ ಅಭಿಮಾನಿಗಳ ಅಭಿಮಾನಕ್ಕೆ ಮನಸೋತು ಹೆಲಿಕಾಪ್ಟರ್‌ನಿಂದ ಇಳಿಯುತ್ತಿದ್ದಂತೆ, ಅವರನ್ನು ನೋಡಲು ಮುಗಿಬಿದ್ದರು. ಆದ್ರೆ, ನಿನ್ನೆ ಸರ್ಕಾರ ಜಾರಿ ಮಾಡಿರುವ ಹೊಸ ಕೊರೊನಾ ನಿಯಮವನ್ನು ಗಾಳಿಗೆ ತೂರಿದ್ದು ಮಾತ್ರ ವಿಪರ್ಯಾಸ.