ಅರಕಲಗೂಡು:ಹಳ್ಳಿಗಳಿಗೆ ಟ್ಯಾಂಕರ್ ಬಳಸಿಕೊಂಡು ಕುಡಿಯುವ ನೀರು ಸರಬರಾಜು ಮಾಡಲು ತಾಲೂಕು ಆಡಳಿತ ಇಲಾಖೆ ಕ್ರಮ ವಹಿಸಬೇಕು ಎಂದು ಕೆಡಿಪಿ ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಆಗ್ರಹಿಸಿದರು.
ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನೀರು ನಿರ್ವಹಣೆಗಾಗಿ 15ನೇ ಹಣಕಾಸು ಯೋಜನೆಡಿಯಲ್ಲಿ ಅನುದಾನ ಕಾಯ್ದಿರಿಸಬೇಕು. ನೀರು ಸರಬರಾಜು ಹೆಸರಿನಲ್ಲಿ ಬರೀ ಪೈಪ್ ಅಳವಡಿಸಿದರೆ ಹೇಗೆ? ಸರಬರಾಜು ಮಾಡಲು ನೀರು ಬೇಡವೇ ಎಂದು ಪ್ರಶ್ನಿಸಿದರು. ಇತ್ತೀಚಿನ ದಿನಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ದುಂದು ವೆಚ್ಚ ನಿಲ್ಲಿಸಿ, ನೀರು ಸರಬರಾಜು ಮಾಡಿ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು.
ನಂತರ ಮೊನ್ನೆ ಇತ್ತೀಚೆಗೆ ಸಂಭವಿಸಿದ ಸ್ಫೋಟ ದುರಂತದ ಬಗ್ಗೆ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ಅರಕಲಗೂಡು ತಾಲೂಕಿನಲ್ಲಿ ಎಷ್ಟು ಕಲ್ಲು ಗಣಿಗಾರಿಕೆಗಳು ನಡೆಯುತ್ತಿವೆ ಎಂಬುದರ ಬಗ್ಗೆ ಮಾಹಿತಿ ನೀಡಿ ಎಂದು ತಹಶೀಲ್ದಾರ್ ರನ್ನು ಕೇಳಿದರು. ಅವರು ಸರಿಯಾಗಿ ಉತ್ತರ ನೀಡದೆ ಇದ್ದಾಗ ಪೊಲೀಸ್ ಇಲಾಖೆಯವರನ್ನು ಕೇಳಿದರು. ಗಣಿಗಾರಿಕೆ ನಡೆಸುತ್ತಿರುವವರ ಮೇಲೆ ನಿಗಾ ಇಡುವಂತೆ ಇಲಾಖೆಗೆ ಸೂಚಿಸಿದರು. ಜಿಲೆಟಿನ್ ಕಡ್ಡಿಗಳನ್ನು ಬಹಳ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಅದಕ್ಕೆ ತುಂಬಾ ರೂಲ್ಸ್ ಗಳಿವೆ ಅದನ್ನು ಯಾರು ಕೂಡ ಪಾಲಿಸುತ್ತಿಲ್ಲ, ಆದ್ದರಿಂದ ನೀವುಗಳು ಅಲ್ಲಿಗೆ ಭೇಟಿ ನೀಡಿ ಕೇಸ್ ದಾಖಲಿಸಿ ಎಂದು ತಾಕೀತು ಮಾಡಿದರು.