ಹಾಸನ: ಹಾಸನ ಅಂದರೆ ರಾಜಕೀಯವಾಗಿ ತನ್ನದೇ ಆದಂತಹ ಹೆಸರು ಮಾಡಿದ ಜಿಲ್ಲೆ. ಅಭಿವೃದ್ಧಿ ವಿಚಾರದಲ್ಲಿ ಹಾಸನ ಹಿಂದೆ ಬಿದ್ದಿಲ್ಲ. ಮಾಜಿ ಪ್ರಧಾನಿಗಳನ್ನು ಕೊಟ್ಟಂತಹ ಜಿಲ್ಲೆ ಒಂದು ಕಡೆಯಾದರೆ, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮೂರು ಪಕ್ಷದ ನಾಯಕರುಗಳು ಕೂಡ ಪ್ರತಿ ಬಜೆಟ್ ನಲ್ಲೂ ಯಾವುದಾದರೂ ಒಂದು ಕೊಡುಗೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಸನ ನಗರಸಭೆ ಆದ ಬಳಿಕ ಸದ್ಯ 35 ವಾರ್ಡ್ ಗಳನ್ನು ಹೊಂದಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಪ್ರಕಟವಾಗದ ಹಿನ್ನೆಲೆಯಲ್ಲಿ ಸದ್ಯ ಎರಡುವರೆ ವರ್ಷಗಳಿಂದಲೂ ಕೂಡ ನಗರಸಭೆಗೆ ಆಯ್ಕೆಯಾದ ಸದಸ್ಯರುಗಳಲ್ಲಿ ಅಧಿಕಾರವಿಲ್ಲದೆ ಕೈಕಟ್ಟಿ ಕುಳಿತಿದ್ದಾರೆ. ಹೀಗಿರುವಾಗ ಹಾಸನ ನಗರಸಭೆ ವ್ಯಾಪ್ತಿಗೆ ಬರುವ ಕ್ಷೇತ್ರಾಭಿವೃದ್ಧಿ ಮರೀಚಿಕೆಯಾಗಿದೆ.
ಹಾಸನ ನಗರಸಭೆ ಜನಪ್ರತಿನಿಧಿಗಳು ಇಲ್ಲದೆ ಅಭಿವೃದ್ಧಿಯಲ್ಲಿ ಕೂಡ ಹಿಂದೆ ಬಿದ್ದಿದೆ. ಇದಕ್ಕೆ ಸ್ಪಷ್ಟ ನಿದರ್ಶನ ಎಂದರೆ ಬೀದಿ ದೀಪಗಳದ್ದೇ ದೊಡ್ಡ ಸಮಸ್ಯೆ, ಹಾಸನ ನಗರಸಭೆ ವತಿಯಿಂದ 35 ವಾರ್ಡ್ ಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಆದರೆ ಸರಿಯಾದ ನಿರ್ವಹಣೆ ಇಲ್ಲದೇ ಹಾಳಾಗಿವೆ. ಹಾಸನದ ಪ್ರಮುಖ ರಸ್ತೆಗಳಲ್ಲಿ ಕೆಲವೊಂದು ಕಡೆ ದೀಪಗಳೇ ಇರುವುದಿಲ್ಲ. ಹೀಗಾಗಿ ಪುಂಡ ಪೋಕರಿಗಳ ಆವಾಸ ಸ್ಥಾನವಾಗಿ ಬಿಟ್ಟಿದೆ.
ಪ್ರಮುಖ ರಸ್ತೆಗಳಲ್ಲಿ ಇಲ್ಲ ಬೀದಿ ದೀಪಗಳು:
ಹಾಸನ ನಗರದ ಎಮ್ಜಿ ರಸ್ತೆಯಲ್ಲಿ ಕೆಲವೊಮ್ಮೆ ಬೀದಿದೀಪಗಳು ಉರಿಯುವುದಿಲ್ಲ. ಪ್ರತಿನಿತ್ಯ ಇಲ್ಲಿ ಸಂಜೆಯಾಗುತ್ತಲೇ ಸಾವಿರಾರು ಮಂದಿ ಓಡಾಡುತ್ತಲೇ ಇರುತ್ತಾರೆ. ಕಾರಣ ಇದೇ ರಸ್ತೆಯಲ್ಲಿ ದೇವಸ್ಥಾನ, ಶಾಪಿಂಗ್ ಮಾರ್ಕೆಟ್, ಫಾಸ್ಟ್ ಫುಡ್ ಸವಿಯಲು ಸೂಕ್ತ ಸ್ಥಳವಾಗಿದ್ದು, ಇಂತಹ ರಸ್ತೆಯಲ್ಲಿಯೇ ರಾತ್ರಿ ವೇಳೆ ವಿದ್ಯುತ್ ದೀಪ ಉರಿಯದೆ ಇರುವುದು ಪುಂಡ ಯುವಕರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ.
ಬೀದಿ ದೀಪದ ಸಮಸ್ಯೆಯಿಂದ ಹೆಚ್ಚಾಗುತ್ತಿದೆ ಅಪರಾಧ ಪ್ರಕರಣಗಳು:
ರಾತ್ರಿ ಆಗುತ್ತಲೇ ಕೆಲ ಪುಂಡ ಪೋಕರಿಗಳು ಬೈಕ್ ವ್ಹೀಲಿಂಗ್ ಮಾಡುವ ಮೂಲಕ ನಾಗರಿಕರಿಗೆ ತೊಂದರೆ ಕೊಡುತ್ತಿರುತ್ತಾರೆ. ಕಳೆದ ಹದಿನೈದು ದಿನಗಳ ಹಿಂದೆ ನಗರದ ಪ್ರಮುಖ ರಸ್ತೆಯಾದ ಎಂಆರ್ ವೃತ್ತದ ಬಳಿ ನಡುರಾತ್ರಿಯಲ್ಲಿ ಒಬ್ಬ ಮಹಿಳೆಯ ಕೊಲೆ ನಡೆದಿದ್ದು, ಬಳಿಕ ಆಕೆ ಮೇಲೆ ಅತ್ಯಾಚಾರ ಮಾಡಿದ್ದು, ಇದಕ್ಕೆ ಸ್ಪಷ್ಟ ಉದಾಹರಣೆ. ಇದೆ ಅಲ್ಲದೆ ಹಾಸನದ ರಿಂಗ್ ರಸ್ತೆಯಲ್ಲಿ ನಡೆದ ಕೊಲೆ ಪ್ರಕರಣ, ಬೀದಿ ದೀಪ ಇಲ್ಲದಿರುವುದೇ ಪ್ರಮುಖ ಕಾರಣ ಎಂದರೆ ತಪ್ಪಾಗದು.