ಹಾಸನ :ರೈತರು ಬೆಳೆದ ಭತ್ತವನ್ನ ಕಡಿಮೆ ಬೆಲೆಗೆ ಮಾರುವ ಬದಲು ನಮ್ಮ ಕ್ಷೇತ್ರದ ಶಾಸಕರು ಸತ್ರೆ ಅವರ ತಿಥಿಗೆ ಉಚಿತವಾಗಿ ಕೊಡಿ ಸರ್ ಎಂದು ರೈತ ಸಂಘಟನೆ ಮುಖಂಡ ಕಣಗಾಲ್ ಮೂರ್ತಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ರೈತ ಮುಖಂಡ ಕಣಗಾಲ್ ಮೂರ್ತಿ ನೇತೃತ್ವದಲ್ಲಿ 30ಕ್ಕೂ ಹೆಚ್ಚು ರೈತರು ತಾವು ಬೆಳೆದ ಭತ್ತವನ್ನು ಮಾರಾಟ ಮಾಡಲು ಸಾಧ್ಯವಾಗದ ಹಿನ್ನೆಲೆ ಡಿಸಿ ಕಚೇರಿ ಆವರಣದಲ್ಲಿ ಸುರಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಭತ್ತ ಸುರಿದು ಪ್ರತಿಭಟನೆ.. ಬಳಿಕ ಮಾತನಾಡಿದ ರೈತ ಮುಖಂಡ ಕಣಗಾಲ್ ಮೂರ್ತಿ, ರೈತರು ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ನೀಡದೆ ದಲ್ಲಾಳಿಗಳ ಮೂಲಕ ಖರೀದಿ ಮಾಡುವ ಪ್ರಕ್ರಿಯೆಗೆ ಅಧಿಕಾರಿಗಳು ಕೈ ಹಾಕಿದ್ದಾರೆ. ಕ್ವಿಂಟಲ್ ಭತ್ತಕ್ಕೆ 1,860 ರೂ. ಬೆಲೆ ಇದ್ದು, ಮಧ್ಯವರ್ತಿಗಳ ಮೂಲಕ 1,200ಕ್ಕೆ ಖರೀದಿ ಮಾಡಿ ನಮ್ಮ ಹೆಸರಲ್ಲಿಯೇ ಸರ್ಕಾರ ನಿಗದಿ ಪಡಿಸಿದ ಬೆಲೆಗೆ ಅವರು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರ ಮುಂದಿನ ದಿನಗಳಲ್ಲಿ ರೈತರ ಸಮಸ್ಯೆಗಳಿಗೆ ಮತ್ತು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಿ ಸರ್ಕಾರದಿಂದಲೇ ಖರೀದಿ ಕೇಂದ್ರವನ್ನು ಸ್ಥಾಪನೆ ಮಾಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ಮಾಡುವ ಎಚ್ಚರಿಕೆ ನೀಡಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು, ರೈತರ ಸಮಸ್ಯೆಯನ್ನು ಆಲಿಸಿ, ಕೂಡಲೇ ಇದರಲ್ಲಿ ಭಾಗಿಯಾಗಿರುವ ಸರ್ಕಾರಿ ಅಧಿಕಾರಿಗಳನ್ನು ಪತ್ತೆ ಮಾಡಿ ಕ್ರಮಕೈಗೊಳ್ಳಬೇಕು, ರೈತರ ಸಮಸ್ಯೆಯನ್ನು ಬಗೆಹರಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.