ಹಾಸನ:ಆಗಸ್ಟ್ ಮೊದಲ ವಾರದಲ್ಲಿಯೇ ಪ್ರಾರಂಭವಾದ ಆಶ್ಲೇಷ ಮಳೆಗೆ ಜಿಲ್ಲೆಯ ಆರು ತಾಲೂಕುಗಳಲ್ಲಿ ನೆರೆ ಆವರಿಸಿ, ಸಾಕಷ್ಟು ಮಂದಿ ಪ್ರವಾಹಕ್ಕೆ ತತ್ತರಿಸಿದ್ದರು. ಇತಿಹಾಸದಲ್ಲಿಯೇ ಕಂಡರಿಯದ ಮಳೆ ಮತ್ತು ಪ್ರವಾಹ ಬಂದಿದ್ದರಿಂದ ಸಕಲೇಶಪುರ, ಹೊಳೆನರಸೀಪುರ, ಆಲೂರು ಮತ್ತು ಅರಕಲಗೂಡು ತಾಲೂಕಿನ ಜನತೆ ನೆರೆಗೆ ನಲುಗಿ ಹೋಗಿದ್ದರು.
ಹಾಸನದಲ್ಲಿ ಧಾರಾಕಾರ ಮಳೆ... ಜನಜೀವನ ಅಸ್ತವ್ಯಸ್ತ
ನಾಲ್ಕು ದಿನದಿಂದ ಬಿಡುವ ಕೊಟ್ಟಿದ್ದ ಮಳೆರಾಯ ನಿನ್ನೆಯಿಂದ ಮತ್ತೆ ಭೋರ್ಗರೆದು ಸುರಿಯುವ ಮೂಲಕ ಜಿಲ್ಲೆಯಲ್ಲಿ ಮತ್ತೊಮ್ಮೆ ಆತಂಕ ಸೃಷ್ಟಿಸಿದ್ದಾನೆ. ನಿನ್ನೆ ಬೆಳಗ್ಗೆಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಜನರು ಹೈರಾಣಾಗಿದ್ದಾರೆ.
ಇದೀಗ ಎರಡು ದಿನಗಳ ಹಿಂದಷ್ಟೇ ಪ್ರಾರಂಭವಾಗಿರುವ ಮಕ ಮಳೆಗೆ ಹಾಸನ ಜನ, ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗೆಡ್ಡೆ ಕೊಳೆತು ಹೋಗುವ ಆತಂಕದಲ್ಲಿ ರೈತರಿದ್ದಾರೆ.
ಭಾರೀ ಮಳೆಯಿಂದಾಗಿ ಕಟ್ಟಿನಕೆರೆ ಮಾರುಕಟ್ಟೆ, ಪೆನ್ಶನ್ ಮೊಹಲ್ಲಾ, ಬಿಎಸ್ಎನ್ಎಲ್ ಭವನ ಮುಂಭಾಗದ ರಸ್ತೆಗಳು ನದಿಯಂತೆ ಹರಿದು ವಾಹನಗಳ ಸಂಚಾರ ದುಸ್ತರವಾಗಿತ್ತು. ಬಿಗ್ ಬಜಾರ್ ಸಮೀಪ ಚರಂಡಿಯನ್ನು ಮುಚ್ಚಿ, ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದರಿಂದ ನೀರು ಸರಾಗವಾಗಿ ಹರಿಯದ ಕಾರಣ ರಸ್ತೆಯ ತುಂಬೆಲ್ಲಾ ನೀರು ತುಂಬಿಕೊಂಡು ದ್ವಿಚಕ್ರ ವಾಹನಗಳು ಹಾಗೂ ಪಾದಚಾರಿಗಳು ಪರದಾಡುವಂತಾಗಿತ್ತು.