ಹಾಸನ: ಗ್ರಾಮ ಪಂಚಾಯಿತಿಯಲ್ಲಿ ಗೆದ್ದಿರುವ ನಮ್ಮ ಪಕ್ಷದ ಬೆಂಬಲಿಗರು ಯಾವುದೇ ಕಾರಣಕ್ಕೂ ಯಾವ ಆಮಿಷಕ್ಕೂ ಬಲಿಯಾಗದೆ ಪಕ್ಷ ಬದಲಿಸುವುದಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ನನಗೆ ಅರಿವಿದೆ. 2023ಕ್ಕೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದೇ ತರುತ್ತೇವೆ. ಒಂದು ವೇಳೆ, ಅಧಿಕಾರಕ್ಕೆ ತರದಿದ್ದರೆ ನಾನು ರಾಜಕೀಯದಲ್ಲಿ ಇರಲ್ಲ. ಮಾಜಿ ಪ್ರಧಾನಿ ದೇವೇಗೌಡರ ಸಮ್ಮುಖದಲ್ಲೇ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಹೆಚ್.ಡಿ ರೇವಣ್ಣ ಮಾಧ್ಯಮಗೋಷ್ಠಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 8 ತಾಲೂಕುಗಳಲ್ಲಿ ಬಹುತೇಕ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಗೆದ್ದ ಶೇ 75ಕ್ಕೂ ಅಧಿಕ ಬೆಂಬಲಿತ ಅಭ್ಯರ್ಥಿಗಳು ನಮ್ಮ ಮನೆಗೆ ಬಂದು ತಮ್ಮ ಪಕ್ಷದ ಮೂಲಕ ನಾನು ಗೆದ್ದಿದ್ದೇನೆ ಎಂದು ಅವರೇ ಹೇಳುತ್ತಿದ್ದಾರೆ.
ನನ್ನ ತಾಲೂಕಿನಲ್ಲಿಯೂ ಶೇ.90ರಷ್ಟು ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಅರಸೀಕೆರೆ ಬೇಲೂರು, ಚೆನ್ನರಾಯಪಟ್ಟಣ, ಸಕಲೇಶಪುರ ಹಾಗೂ ಅರಕಲಗೂಡು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದು ಅಲ್ಲಿನ ಶಾಸಕರು ಖುದ್ದು ದೂರವಾಣಿ ಮೂಲಕ ಹೇಳಿದ್ದು ಗಮನಿಸಿದರೆ ಮುಂದಿನ ದಿನಗಳಲ್ಲಿ ಪಕ್ಷ ಮತ್ತಷ್ಟು ಬಲಗೊಳ್ಳುತ್ತದೆ ಎಂದು ರೇವಣ್ಣ ಹೇಳಿದರು.
ಚುನಾವಣಾ ಆಯೋಗ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತಿದೆ. ಚುನಾವಣೆಗೂ ಮುನ್ನ ಮೀಸಲಾತಿ ಪಟ್ಟಿ ಪ್ರಕಟ ಮಾಡಬೇಕು. ಆದರೆ ಆಯೋಗ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿರುವುದು ಬಹಳ ಬೇಸರವಾಗುತ್ತಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವುದಕ್ಕಿಂತ ಚುನಾವಣೆ ಮಾಡದೇ ಇರುವುದೇ ಲೇಸು.
ಎಲ್ಲರನ್ನೂ ಅವಿರೋಧವಾಗಿ ಆಯ್ಕೆ ಮಾಡುವ ಆದೇಶ ಮಾಡಲಿ ಎಂದು ಚುನಾವಣಾ ಆಯೋಗಕ್ಕೂ ಅವರು ಕುಟುಕಿದರು. ಇದೇ ವೇಳೆ ನ್ಯಾಯಾಲಯದ ಮೇಲೆ ಅಪಾರ ಗೌರವವಿದ್ದು, ಆದೇಶಕ್ಕೆ ತಲೆಬಾಗುತ್ತೇವೆ ಎಂದರು.
ಓದಿ:ಸವದಿ ಸಮ್ಮುಖದಲ್ಲಿ ಬಿಜೆಪಿ ಸೇರಿದ ಅಥಣಿ ತಾಲೂಕು ಜೆಡಿಎಸ್ ಮಾಜಿ ಅಧ್ಯಕ್ಷ