ಹಾಸನ: ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯ ಸ್ವಾಯತ್ತ ಸಂಸ್ಥೆಗಳನ್ನು ಬಿಜೆಪಿ ಅವರು ಹೀಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದರೆ ಮುಂದೊಂದು ದಿನ ಐಟಿಗೆ ಮೂರು ಕಾಸಿನ ಬೆಲೆಯೂ ಇರಲ್ಲ ಎಂದು ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ದೇವೇಗೌಡ್ರ ಜೊತೆ ಮಂಡ್ಯ, ಹಾಸನದ ಅಭ್ಯರ್ಥಿಗಳು ದೆಹಲಿಗೆ ಹೋಗುವುದು ನಿಶ್ಚಿತ. ಮೈತ್ರಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದು ಹೇಳಿದರು. ರಾಜ್ಯದ ಅಭಿವೃದ್ಧಿಗೆ ಮೈತ್ರಿ ಸರ್ಕಾರ ಸುಭದ್ರವಾಗಿರಲಿದೆ. ಇನ್ನೂ ಎರಡನೇ ಹಂತದ ಲೋಕಸಭಾ ಚುನಾವಣೆ ಮುಗಿಯುವ ಮೊದಲೇ ಮೈತ್ರಿ ಸರ್ಕಾರ ಬೀಳಿಸಲು ಹೊರಟಿದ್ದಾರೆ. ಜನಸಾಮಾನ್ಯರ ಹಿತ ಕಾಪಾಡುವುದು ಹಾಗೂ ರೈತರ ಹಿತ ಕಾಯುವ ಕೆಲಸಗಳನ್ನ ವಿರೋಧ ಪಕ್ಷದವರು ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ಬಿಜೆಪಿಯವರು 10 ತಿಂಗಳಿಂದ ಸರ್ಕಾರ ಪಥನಗೊಳಿಸುವ ಹುನ್ನಾರ ನಡೆಸಿದ್ದಾರೆ. ಕೆಲವು ಮಾರವಾಡಿ ಗುತ್ತಿಗೆದಾರರಿಗೆ ಕೆಲವರು ಮೇ 23 ಚುನಾವಣಾ ಫಲಿತಾಂಶದ ಬಳಿಕ ಸರ್ಕಾರ ಬೀಳುತ್ತೆ ಎಂದು ಹೆದರಿಸುತ್ತಿದ್ದಾರೆ. ಯಾವ ಆಪರೇಷನ್ ಕಮಲನೂ ಇಲ್ಲ, ಹುಣಸೇಕಾಯಿ ಗೆಡ್ಡೆನೂ ಇಲ್ಲ.ಮಂಡ್ಯ, ಹಾಸನ ಹಾಗೂ ತುಮಕೂರಿನಲ್ಲಿ ಕೆಲವು ಎಲೆಕ್ಟ್ರಾನಿಕ್ ಮಾಧ್ಯಮಗಳು ಬೇಕಾ,ಬಿಟ್ಟಿ ಪ್ರಚಾರ ನೀಡಿದ್ದಾರೆ. ಹೀಗೆ ಪ್ರಚಾರ ಮಾಡುತ್ತಿದ್ದರೆ. ಜನಸಾಮಾನ್ಯರಿಗೆ ಎಲೆಕ್ಟ್ರಾನಿಕ್ ಮಾಧ್ಯಮಗಳ ಬಗ್ಗೆ ಮೂರು ಕಾಸಿನ ಬೆಲೆಯೂ ಸಿಗಲ್ಲ. ನೀವು ಏನೇ ಮಾಡಿದರೂ ನಾವೇ ಗೆಲ್ಲೋದು. ಬೇಕಿದ್ರೆ ಶಾಸ್ತ್ರ ಹೇಳ್ತಿನಿ ಬರೆದಿಟ್ಟುಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.