ಕರ್ನಾಟಕ

karnataka

ETV Bharat / state

ಹಾಸನಾಂಬೆ ದೇವಿಯ ಪವಿತ್ರ ಕ್ಷೇತ್ರದಿಂದಲೇ ಒಗ್ಗಟ್ಟು ಪ್ರದರ್ಶನ : ಹೆಚ್ ಡಿ ಕುಮಾರಸ್ವಾಮಿ

ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಇಂದು ತಮ್ಮ ಪತ್ನಿಯೊಂದಿಗೆ ಹಾಸನಾಂಬ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ಹಾಸನಾಂಬೆ ದೇವಿಯ ಪವಿತ್ರ ಕ್ಷೇತ್ರದಿಂದಲೇ ಒಗ್ಗಟ್ಟು ಪ್ರದರ್ಶನ
ಹಾಸನಾಂಬೆ ದೇವಿಯ ಪವಿತ್ರ ಕ್ಷೇತ್ರದಿಂದಲೇ ಒಗ್ಗಟ್ಟು ಪ್ರದರ್ಶನ

By ETV Bharat Karnataka Team

Published : Nov 7, 2023, 4:14 PM IST

ಹಾಸನ: ನಮ್ಮ ನಾಡಿನಲ್ಲಿ ಸಂಪತ್ತು ಹೇರಳವಾಗಿದ್ದು ಅದು ಸಮರ್ಪಕವಾಗಿ ಎಲ್ಲರಿಗೂ ಸದ್ಬಳಕೆಯಾಗುವಂತೆ ಹಾಗೂ ಹಂಚಿಕೆಯಾಗುವಂತೆ ಈ ರಾಜ್ಯವನ್ನು ಆಳುವವರಿಗೆ ದೇವರು ಜ್ಞಾನೋದಯ ಮಾಡಿಸಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಹಾಸನದ ಆದಿ ದೇವತೆ ಹಾಸನಾಂಬ ದೇಗುಲಕ್ಕೆ ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿ, ನಂತರ ಜಿಲ್ಲಾಡಳಿತದಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ದೇವರಿಗೆ ಪೂಜೆ ಸಲ್ಲಿಸುವ ವೇಳೆ ಬರದ ಸಂಕಷ್ಟದಿಂದ ನೊಂದಿರುವ ನಾಡಿನ ಅನ್ನದಾತ ರೈತರಿಗೆ ಒಳ್ಳೆಯದಾಗಲಿ. ನಾಡಿನ ಎಲ್ಲ ಜನರ ಬದುಕು ಹಸನಾಗಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು. ಬಡವರ, ರೈತರ, ದೀನದಲಿತರ ಸೇವೆ ಮಾಡಲು ಒಳ್ಳೆಯ ಆರೋಗ್ಯವನ್ನು ತಾಯಿ ನನಗೆ ಕರುಣಿಸಲಿ ಎಂದು ಕೇಳಿಕೊಂಡಿರುವುದಾಗಿ ತಿಳಿಸಿದರು.

ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ನಮ್ಮ ಪಕ್ಷದ ಶಾಸಕರ ಮೇಲೆ ಗದಾಪ್ರಹಾರ ನಡೆಯುತ್ತಿದೆ. ಹಾಗಾಗಿ ಜೆಡಿಎಸ್​ನ ಎಲ್ಲಾ ಶಾಸಕರು ಹಾಸನಾಂಬ ದರ್ಶನಕ್ಕೆ ಆಗಮಿಸಲಿದ್ದು, ಹಾಸನಾಂಬೆ ದೇವಿಯ ಪವಿತ್ರ ಕ್ಷೇತ್ರದಿಂದಲೇ ತಾವು ಒಗ್ಗಟ್ಟು ಪ್ರದರ್ಶನ ಮಾಡುವುದಾಗಿ ಇದೆ ವೇಳೆ ಘೋಷಿಸಿದರು. ಹಾಸನಾಂಬ ದೇಗುಲಕ್ಕೆ ತಂದೆ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರೊಡನೆ ಭೇಟಿ ನೀಡುತ್ತಿದ್ದ ಸಂದರ್ಭವನ್ನು ಹಾಗೂ ತಮ್ಮ ಅಜ್ಜಿ ಹಾಸನಾಂಬ ದೇವರ ದೀಪಕ್ಕಾಗಿ ಎಣ್ಣೆ ತಂದು ಕೊಡುತ್ತಿದ್ದ ದಿನಗಳನ್ನು ಇದೇ ವೇಳೆ ಹೆಚ್​ಡಿಕೆ ನೆನೆದರು.

ರೈತ ಸಾಂತ್ವನ ಯಾತ್ರೆ:ಕಳೆದ ಎರಡು ದಿನಗಳ ಹಿಂದೆ ನಡೆದ ಮಾಧ್ಯಮಗೋಷ್ಟಿಯಲ್ಲಿ ಡಿಸೆಂಬರ್​ನಲ್ಲಿ ನಡೆಯುವ ಅಧಿವೇಶನ ಮುಕ್ತಾಯದ ಬಳಿಕ 31 ಜಿಲ್ಲೆಯಲ್ಲಿ 'ರೈತ ಸಾಂತ್ವನ ಯಾತ್ರೆಗೆ' ಚಾಲನೆ ನೀಡಲಾಗುವುದು ಎಂದು ಕುಮಾರಸ್ವಾಮಿ ಘೋಷಿಸಿದ್ದರು.

ಜೆಡಿಎಸ್​​ ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಬರ ಅಧ್ಯಯನ ತಂಡಗಳ ರಚನೆ ಸಭೆ ನಂತರ ಈ ಹೇಳಿಕೆ ನೀಡಿದ್ದರು. ಅಧಿವೇಶನ ಮುಗಿದ ನಂತರ ಬಸ್ ವ್ಯವಸ್ಥೆ ಮಾಡಿ 20 ರಿಂದ 25 ಮಂದಿ ನಾಯಕರ ಜೊತೆ 31 ಜಿಲ್ಲೆಗಳಲ್ಲೂ ರೈತ ಸಾಂತ್ವನ ಯಾತ್ರೆ ಮಾಡಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದರು. ಜತೆಗೆ ರೈತ ಕುಟುಂಬ ಆತ್ಮ ಸ್ಥೈರ್ಯ ಕಳೆದುಕೊಳ್ಳಬಾರದು ಎಂದು ನಾಡಿನ ರೈತರಿಗೆ ಮನವಿ ಮಾಡಿದ್ದ ಅವರು, ಜನರ ಪರ, ರೈತರ ಪರವಾಗಿ ಜೆಡಿಎಸ್ ಇದೆ ಎಂದು ಹೇಳಿದ್ದರು.

ಇದನ್ನೂ ಓದಿ:ಆಪರೇಷನ್‌ ಮಾಡಲು ಗುಳ್ಳೆನರಿಗಳಂತೆ ಹೊಂಚು ಹಾಕುತ್ತಿದ್ದೀರಿ: ಕುಮಾರಸ್ವಾಮಿ

ABOUT THE AUTHOR

...view details