ಹಾಸನ: ಹುಲುಸಾಗಿ ಬೆಳೆದ ಭತ್ತದ ಬೆಳೆಯನ್ನು ಕಾಡಾನೆಗಳು ತುಳಿದು, ತಿಂದು ಹಾಳು ಮಾಡುವ ಮೂಲಕ ರೈತರ ಬದುಕನ್ನು ನಾಶ ಮಾಡುತ್ತಿವೆ. ಕಟಾವಿಗೆ ಬಂದಿದ್ದ ಭತ್ತದ ಗದ್ದೆ ಹಾಗೂ ಕೃಷಿ ಹೊಂಡವನ್ನು ಕಾಡಾನೆಗಳು ನಾಶ ಮಾಡಿವೆ ಎಂದು ಸಿಟ್ಟಿಗೆದ್ದ ರೈತರು ಕಾಡಾನೆಯಿಂದ ಬೆಳೆ ಹಾನಿಯಾದ ಗದ್ದೆಯಲ್ಲಿಯೇ ಕುಳಿತು ದಿಢೀರ್ ಪ್ರತಿಭಟನೆ ನಡೆಸಿದರು.
10 ವರ್ಷಗಳಿಂದ ಕಾಡಾನೆಗಳು ಮಲೆನಾಡು ಭಾಗದ ಕಾಫಿ, ಅಡಿಕೆ, ಬಾಳೆ ತೋಟಗಳಲ್ಲಿಯೇ ವಾಸ್ತವ್ಯ ಹೂಡುತ್ತಿವೆ. ಜೀವ, ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿ ಮಾಡುತ್ತಲೇ ಇದ್ದು, ಇವುಗಳ ನಿರಂತರ ಉಪಟಳ ಸಹಿಸಿಕೊಂಡು ಜೀವನ ನಡೆಸುವುದಕ್ಕೆ ಸಾಧ್ಯವೇ ಇಲ್ಲ ಎಂದು ತಾಪಂ ಸದಸ್ಯ ಯಡೇಹಳ್ಳಿ ಆರ್.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಶಾಶ್ವತವಾಗಿ ಕಾಡಾನೆ ದಾಳಿ ತಡೆಯಲು ಕ್ರಮ ಕೈಗೊಳ್ಳುವಂತೆ ರೈತರ ದಿಢೀರ್ ಪ್ರತಿಭಟನೆ ಕಾಡಾನೆಗಳನ್ನು ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಕಾಡಿನಲ್ಲಿ ದೊಡ್ಡ ದೊಡ್ಡ ಯೋಜನೆಗಳಿಗೆ ಸರ್ಕಾರವೇ ಅನುಮತಿ ನೀಡಿರುವ ಪರಿಣಾಮ ಕಾಡಿನಲ್ಲಿ ಇರಬೇಕಾದ ಕಾಡಾನೆ, ಕಾಟಿ ಸೇರಿದಂತೆ ವನ್ಯಜೀವಿಗಳು ರೈತರ ಜಮೀನುಗಳಲ್ಲಿ ಬಂದು ಸೇರಿಕೊಂಡಿವೆ. ಕಾಡಾನೆ ಸಮಸ್ಯೆಗೆ ಸರ್ಕಾರದ ಅರಣ್ಯ ನಾಶ ಯೋಜನೆಯೇ ಕಾರಣ.
ಅಲ್ಲದೆ, ಡಿಎಫ್ಓ ಬಸವರಾಜು ಬಾಬು ಹಾಗೂ ಎಸಿಎಫ್ ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿ ಕೆಲಕಾಲ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಕೂಡಲೇ ಕೊಡಗಿನ ಗಡಿ ಭಾಗದಲ್ಲಿ ರೈಲ್ವೆ ಕಂಬಿಗಳನ್ನು ಹಾಕುವ ಮೂಲಕ ಆನೆ ಹಾವಳಿಯನ್ನು ತಡೆಗಟ್ಟಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.