ಹಾಸನ: ಜಿಲ್ಲಾ ಪಂಚಾಯಿತಿಯಲ್ಲಿ ಇಂದು ಬೆಳಗ್ಗೆ ನಡೆಯಬೇಕಿದ್ದ ಸಭೆಯು ಕೋರಂ ಕೊರತೆಯಿಂದ ಮುಂದೂಡಲ್ಪಟ್ಟಿತು.
ಕೋರಂ ಕೊರತೆಯಿಂದ ಜಿ.ಪಂ ಸಭೆ ಮುಂದೂಡಿಕೆ ಶಿಕ್ಷಕರ ದಿನಾಚರಣೆ ಅಂಗವಾಗಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ರವರ ಜನ್ಮ ದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನಂತರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎ. ಪರಮೇಶ್ ಹಾಗೂ ಸದಸ್ಯರು ಸಭೆ ಮುಕ್ತಾಯಗೊಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಇಂದು 11ಕ್ಕೆ ವಿಶೇಷ ಸಭೆ ಕರೆಯಲಾಗಿತ್ತು. ಸಭೆಗೆ ಜೆಡಿಎಸ್‌ನ 22 ಜಿಲ್ಲಾ ಪಂಚಾಯಿತಿ ಸದಸ್ಯರು ಹೊರತುಪಡಿಸಿ ಉಳಿದ ಕಾಂಗ್ರೆಸ್ ಸದಸ್ಯರು ಮಾತ್ರ ಪಾಲ್ಗೊಂಡಿದ್ದರು. ಒಂದು ಸಭೆ ನಡೆಯಬೇಕಾದರೆ ಕೋರಂ ಇರುವುದು ಅತ್ಯವಶ್ಯಕ. ಆದರೆ ಜೆಡಿಎಸ್‌ನ ಯಾವುದೇ ಸದಸ್ಯರು ಹಾಜರಾಗಿರಲಿಲ್ಲ. ಅವರಿಗಾಗಿ ಮಧ್ಯಾಹ್ನ 1 ಗಂಟೆವರೆಗೂ ಕಾಯಲಾಯಿತು, ನಂತರ ಸಭೆ ಮುಂದೂಡಲಾಯಿತು.
ಅಭಿವೃದ್ಧಿ ಕೆಲಸಗಳಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಣ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಜಿಪಂ ಸದಸ್ಯರು ಒಂದು ಕಡೆ ಆರೋಪ ಮಾಡಿದರೆ, ಮತ್ತೊಂದು ಕಡೆ ಎಲ್ಲಾ ಕ್ಷೇತ್ರಗಳಿಗೂ ಅನುದಾನದಲ್ಲಿ ಹಣ ಹಂಚಿಕೆ ಮಾಡಲಾಗಿದೆ ಎಂಬುದು ಜಿಪಂ ಅಧ್ಯಕ್ಷರ ವಾದ. ಒಟ್ಟಾರೆ ರಾಜಕೀಯ ಕೆಸರಾಟದಲ್ಲಿ ಜಿಲ್ಲಾ ಪಂಚಾಯಿತಿಯಿಂದ ಯಾವ ಅಭಿವೃದ್ಧಿ ಕೆಲಸ ಆಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.