ಬಾಗಿಲು ತೆರೆದ ಹಾಸನಾಂಬ ದೇವಸ್ಥಾನ ಹಾಸನ:ದೀಪ ಬೆಳಗುವ ಮೂಲಕ ಜಿಲ್ಲೆಯ ಅಧಿದೇವತೆ, ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲನ್ನು ಇಂದು ತೆರೆಯಿತು. ಸಂಪ್ರದಾಯದಂತೆ ಜಿಲ್ಲಾಡಳಿತದ ಸಮ್ಮುಖದಲ್ಲಿ ಇಂದು ಮಧ್ಯಾಹ್ನ 12.23ಕ್ಕೆ ವಿಜೃಂಭಣೆಯಿಂದ ತೆರೆಯಲಾಯಿತು.
ಬಾಗಿಲು ತೆರೆಯುವ ಮುನ್ನ ತಳವಾರ ವಂಶಸ್ಥರಾದ ನಂಜರಾಜೇ ಅರಸ್ ಬಾಗಿಲಿನ ಮುಂಭಾಗದಲ್ಲಿ ಬಾಳೆ ಕಂದು ಕಡಿಯುವ ಮೂಲಕ ದೇವಿಯ ದರ್ಶನಕ್ಕೆ ಅನುವು ಮಾಡಿಕೊಟ್ಟರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದ ನಾಥ ಸ್ವಾಮೀಜಿ, ದೇವಾಲದ ಪ್ರಧಾನ ಅರ್ಚಕ ನಾಗರಾಜ್ ಭಟ್, ಜಿಲ್ಲಾಧಿಕಾರಿ ಸತ್ಯಭಾಮ, ಎಸ್ಪಿ ಮಹಮದ್ ಸುಜೀತ ಹಾಗೂ ಜಿಲ್ಲಾಡಳಿತದ ನೇತೃತ್ವದಲ್ಲಿ ಮಧ್ಯಾಹ್ನ 12 ಗಂಟೆ 23 ನಿಮಿಷಕ್ಕೆ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯುವ ಮೂಲಕ ದರ್ಶನಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ಬಾಗಿಲು ತೆರೆದ ಹಾಸನಾಂಬ ದೇವಸ್ಥಾನ ಬಾಳೆ ಕಂದು ಕಡಿದ ಬಳಿಕ ಅರ್ಚಕರು ಬಾಗಿಲು ತೆರೆದರು. ಗಣ್ಯರು ಗರ್ಭಗುಡಿಯ ಒಳಗೆ ಆರದ ದೀಪವನ್ನು ನೋಡಿ ಕಣ್ತುಂಬಿಕೊಂಡರು. ವರ್ಷದ ಹಿಂದೆ ಹಚ್ಚಿಟ್ಟ ದೀಪ ಆರೋದಿಲ್ಲ, ಹೂ ಬಾಡಲ್ಲವೆಂಬ ನಂಬಿಕೆಯಂತೆ ದೀಪ ಉರಿಯುತ್ತಿತ್ತು. ಇನ್ನು ನಾಳೆ ಬೆಳಗ್ಗೆ 6 ಗಂಟೆಯಿಂದ ಹಾಸನಾಂಬಾ ದೇವಿಯ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ನೀಡಲಾಗಿದೆ. ಮೊದಲ ಹಾಗೂ ಕೊನೆಯ ದಿನ ಹೊರತುಪಡಿಸಿ 12 ದಿನಗಳ ಕಾಲ ಮುಂಜಾನೆಯಿಂದ ಹಾಸನಾಂಬೆ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ನೀಡಲಾಗಿದೆ. ಹಾಸನಾಂಬೆ ದರ್ಶನ ಪಡೆಯಲು ಬರುವ ಭಕ್ತರಿಗೆ ಹಾಸನ ಜಿಲ್ಲಾಡಳಿತದಿಂದ ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ಬಾಗಿಲು ತೆರೆದ ಹಾಸನಾಂಬ ದೇವಸ್ಥಾನ ಒಟ್ಟು 14 ದಿನ ದೇವಿ ದರ್ಶನ ನೀಡಲಿದ್ದು, ಹಾಸನಾಂಬೆ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ. ವಿವಿಧ ಬಗೆಯ ಹೂಗಳಿಂದ ದೇವಾಲಯವನ್ನು ಶೃಂಗಾರ ಮಾಡಲಾಗಿದ್ದು, ಕಬ್ಬು, ಜೋಳ, ತೆಂಗಿನ ಕಾಯಿಗಳಿಂದ, ಹಾಸನಾಂಬೆ ಸನ್ನಿಧಿ ಪುಷ್ಪಾಲಂಕಾರದೊಂದಿಗೆ ದೇವಾಲಯ ಸಿಂಗಾರಗೊಂಡು ಕಂಗೊಳಿಸುತ್ತಿದೆ. ಇನ್ನು ನಗರದಲ್ಲಿ ದೀಪಾಲಂಕಾರ ಕೂಡ ನೋಡುಗರ ಕಣ್ಮನ ಸೆಳೆಯುತ್ತಿದೆ. ವರ್ಷದ ಬಳಿಕ ಹಾಸನಾಂಬೆಯ ದರ್ಶನ ಮಾಡುತ್ತಿದ್ದೇವೆ ಎಂಬ ಖುಷಿ ಮನೆ ಮಾಡಿದೆ. ಈ ಬಾರಿ ಭಕ್ತರು ಸಾಲಾಗಿ ಬರಲು ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಲಾಗಿದೆ.
ಬಾಗಿಲು ತೆರೆದ ಹಾಸನಾಂಬ ದೇವಸ್ಥಾನ ಭಕ್ತರ ಅನುಕೂಲಕ್ಕಾಗಿ ಕ್ಯೂಆರ್ ಕೋಡ್ ವ್ಯವಸ್ಥೆ, ಕಾಣಿಕೆ ಹಾಕಲು ಇ-ಹುಂಡಿಯ ವ್ಯವಸ್ಥೆ ಮಾಡಲಾಗಿದೆ. ಇನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ರಂಗೋಲಿ ಸ್ಪರ್ಧೆ, ಹೆಲಿ ಟೂರಿಸಂ ವ್ಯವಸ್ಥೆಯೂ ಇದೆ. ಇಂದು ಮೊದಲ ದಿನವಾಗಿದ್ದು, ಸಾರ್ವಜನಿಕರಿಗೆ ದೇವಿಯ ದರ್ಶನ ಇರಲ್ಲ. ಈ ಬಾರಿ ಶಕ್ತಿ ಯೋಜನೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸೋ ನಿರೀಕ್ಷೆ ಇದೆ. ಸುಮಾರು 1 ಕಿಲೋ ಮೀಟರ್ ಉದ್ದದ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ದಿನದ 24 ಗಂಟೆಯೂ ದೇವಿಯ ದರ್ಶನಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಈ ಬಾರಿ VIP, VVIP, ವಿಶೇಷ ನೇರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಬಾಗಿಲು ತೆರೆದ ಹಾಸನಾಂಬ ದೇವಸ್ಥಾನ ಹಾಸನಾಂಬ ಪವಾಡ : ಪ್ರತಿವರ್ಷ ದೀಪಾವಳಿ ಸಂದರ್ಭದಲ್ಲಿ ಮಾತ್ರ ತೆರೆಯುವ ಹಾಸನಾಂಬ ದೇವಾಲಯ, ಪ್ರತಿವರ್ಷ ದರ್ಶನದ ನಂತರ ಗರ್ಭಗುಡಿ ಬಾಗಿಲು ಹಾಕಿ, ಹಣತೆ ಹಚ್ಚಿ ನೈವೇದ್ಯ ಇಟ್ಟು ಹೂವು ಇಡುತ್ತಾರೆ. ಆದರೆ, ಒಂದು ವರ್ಷದ ನಂತರ ಗರ್ಭಗುಡಿ ಬಾಗಿಲು ತೆಗೆದಾಗ ಹಚ್ಚಿದ ಹಣತೆ ಆರಿರುವುದಿಲ್ಲ, ಇಟ್ಟ ನೈವೇದ್ಯ ಕೆಟ್ಟಿರುವುದಿಲ್ಲ, ಮುಡಿಸಿದ ಹೂವು ಬಾಡಿರುವುದಿಲ್ಲ. ಈ ರೀತಿಯ ನಂಬಿಕೆ ಇಂದಿಗೂ ಸತ್ಯವಾಗಿದ್ದು ಇಂದಿಗೂ ಪವಾಡವಾಗಿದೆ. ಅದಕ್ಕಾಗಿ ವರ್ಷದಲ್ಲಿ ಒಂದು ಬಾರಿ ಮಾತ್ರ ಬಾಗಿಲು ತೆರೆದು ದರ್ಶನ ನೀಡುವ ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರವೇ ಹರಿದು ಬರುತ್ತದೆ. ರಾಜ್ಯದ ಎಲ್ಲಾ ಕಡೆಯಿಂದಲೂ ಇಲ್ಲಿಗೆ ಬರುತ್ತಾರೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತವಾಗಿರುವುದರಿಂದ ಈ ಬಾರಿ ಹಾಸನಾಂಬ ದೇವಿ ದರ್ಶನಕ್ಕೆ ಬರುವವರ ಭಕ್ತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕೂಡ ಆಗಲಿದೆ.
ಇದನ್ನೂ ಓದಿ: ಇಂದು ಮಧ್ಯಾಹ್ನ ಹಾಸನಾಂಬೆ ದೇವಸ್ಥಾನದ ಬಾಗಿಲು ಓಪನ್; ನಾಳೆಯಿಂದ ಭಕ್ತರಿಗೆ ದರ್ಶನಭಾಗ್ಯ