ಹಾಸನ: ಅಮೆರಿಕ ಹಾಗೂ ನಮ್ಮ ದೇಶದ ಪ್ರಧಾನಿಗಳು ಒಂದೇ ದೋಣಿಯಲ್ಲಿ ಸಾಗುತ್ತಿದ್ದಾರೆ ಅಲ್ಲಿಯೂ ನಾಗರಿಕರನ್ನು ಅವರ ಭಾವನೆಯನ್ನು ಬೇರೆ ಕಡೆ ಸೆಳೆಯಲು ಪ್ರಯತ್ನ ಪಡುತ್ತಿದ್ದಾರೆ. ಇಲ್ಲಿ ಮೋದಿ ತಮ್ಮ ವೈಫಲ್ಯಗಳನ್ನು ಮರೆಮಾಚಲು ಹಲವು ಯೋಜನೆಗಳನ್ನು ತಂದು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬಿಜೆಪಿ ವಿರುದ್ಧ ಹರಿಹಾಯ್ದರು.
ಹಾಸನದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿಯೇ ಅಷ್ಟೇ ಅಲ್ಲದೆ ರಾಷ್ಟ್ರದಲ್ಲಿಯೂ ಆತಂಕ ಸೃಷ್ಟಿಮಾಡುವ ಸನ್ನಿವೇಶವಿದೆ. ಕಾರಣ ಮೂರನೇ ಮಹಾಯುದ್ಧ ನಡೆಯುವ ಸಾಧ್ಯತೆ ಕೂಡ ಇದೆ. ನಮ್ಮ ದೇಶದಲ್ಲಿ ಎರಡನೇ ಬಾರಿಗೆ ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕಿಳಿದಿದೆ. ಅದನ್ನು ಸರಿಪಡಿಸಲು ಮುಂದಾಗದೆ ಜನರನ್ನು ದಿಕ್ಕು ತಪ್ಪಿಸುವ ಕಾರ್ಯಕ್ಕೆ ಕೇಂದ್ರ ಕೈ ಹಾಕಿದೆ ಎಂದು ಆರೋಪ ಮಾಡಿದರು.
ನೆರೆ ಪೀಡಿತ ಪ್ರದೇಶಕ್ಕೆ ಕೇಂದ್ರ ಇನ್ನೂ ಕೂಡ ಸರಿಯಾದ ಹಣವನ್ನು ಪಾವತಿಸಿಲ್ಲ. ಬೆಳೆವಿಮೆ ಹಣವನ್ನು ಕೂಡ ಪಾವತಿಸಿಲ್ಲ. ಹೀಗಿರುವಾಗ, ಸರ್ಕಾರ ಅದರ ಬಗ್ಗೆ ಗಮನಹರಿಸದೇ ವೈಯಕ್ತಿಕ ಟೀಕೆ-ಟಿಪ್ಪಣಿಗಳನ್ನು ಮಾಡುತ್ತಾ ಅದರ ಬಗ್ಗೆಯೇ ಚಿಂತನೆ ಮಾಡ್ತಿದ್ದಾರೆ ಎಂದು ಟೀಕಿಸಿದರು.
ನನ್ನ ಕಾಲದಲ್ಲಿಯೇ ನರೇಗಾಕ್ಕೆ 1,200 ಕೋಟಿ ಹಣವನ್ನ ಕೇಂದ್ರ ಕೊಡಬೇಕಿತ್ತು, ಇನ್ನೂ ಕೊಟ್ಟಿಲ್ಲ, ಜೊತೆಗೆ ಇಲ್ಲಿಯವರೆಗೆ 2,900 ಕೋಟಿ ಬರಬೇಕಿದೆ. ಮೊದಲು ಅದನ್ನು ಬಿಡುಗಡೆ ಮಾಡಿ ರೈತರ ಸಂಕಷ್ಟವನ್ನು ಪಾರು ಮಾಡಲಿ. ನನ್ನ ಅಧಿಕಾರವಧಿಯಲ್ಲಿ ಸರ್ಕಾರವನ್ನು ನಾಚಿಕೆ ಸರ್ಕಾರ ಎಂದು ಟೀಕಿಸಿದ್ದಲ್ಲದೆ, ಸರ್ಕಾರ ಟೇಕಾಫ್ ಆಗಿಲ್ಲ ಅಂತ ಟೀಕಾ ಪ್ರಹಾರ ಮಾಡಿದ್ದರು. ಅವರ ಸರ್ಕಾರ ಟೇಕಾಫ್ ಆಗಿದೆಯಾ ಎಂಬುದೇ ಅನುಮಾನವಾಗಿದೆ ಎಂದರು.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಳೆದ ಬಾರಿ ಸಿದ್ದರಾಮಯ್ಯನವರು ಮುಂದಿನದ್ದು ನಮ್ಮದೇ ಸರ್ಕಾರ ಎಂದ್ರು. ಅವರು 78ಕ್ಕೆ ಇಳಿದ್ರು. ಹಾಗಾಗಿ ಅಧಿಕಾರ ಶಾಶ್ವತವಲ್ಲ. ನಾವು ಮಾಡಿದ ಕೆಲಸ ಮಾತ್ರ ಶಾಶ್ವತ ಅದನ್ನು ಉಳಿಸಿಕೊಂಡು ಹೋಗಿ ಅಂತ ಸಲಹೆ ನೀಡಿದ ಅವರು, ಏಸು ಪ್ರತಿಮೆ ಬಗ್ಗೆ ನಾನು ರಾಜಕೀಯ ಬೆರಸಲ್ಲ. ನಮ್ಮಲ್ಲಿ ವಿವಿಧತೆಯಲ್ಲಿ ಏಕತೆ ಎನ್ನುವ ರಾಷ್ಟ್ರ. ಅಲ್ಲಿ ಸಾಕಷ್ಟು ಕ್ರಿಶ್ಚಿಯನ್ ಇದ್ದಾರೆ. ಅಲ್ಲಿ ಡಿಕೆಶಿ ಶಾಸಕನಿದ್ದ ಕಾರಣ ಓಕೆ ಎಂದಿದ್ದಾರೆ. ಸಂವಿಧಾನದಲ್ಲಿ ಕಾನೂನು ಬದ್ಧವಾಗಿ ಯಾವ ಪ್ರತಿಮೆಯನ್ನಾದ್ರು ಮಾಡಬಹುದು. ಆದ್ರೆ ಗೊಂದಲವಿದ್ರೆ ಕೈಹಾಕುವುದು ಬೇಡ ಎನ್ನುವುದು ನನ್ನ ಅಭಿಪ್ರಾಯ ಎಂದರು.