ಹಾಸನ:ದೇಶದಲ್ಲಿ ಕ್ರೀಡಾಸಕ್ತರು ಹೆಚ್ಚಿನ ಆಸಕ್ತಿ ವಹಿಸಿದ್ದರೂ ಅದಕ್ಕೆ ಪ್ರೋತ್ಸಾಹಿಸಬೇಕಾದ ಸರ್ಕಾರ ಪ್ರತಿಭೆಗಳನ್ನು ಗುರುತಿಸಿ ಉತ್ತೇಜನ ನೀಡುವ ಹಾಗೂ ಬಂಡವಾಳ ಹೂಡುವ ನಿಟ್ಟಿನಲ್ಲಿ ಹಿಂದುಳಿದಿದೆ ಎಂದು ಶಾಸಕ ಕೆ. ಎಂ. ಶಿವಲಿಂಗೇಗೌಡ ಆರೋಪಿಸಿದರು.
ನಗರದ ಆದಿಚುಂಚನಗಿರಿ ಪ್ರೌಢಶಾಲಾ ಆವರಣದಲ್ಲಿ ವಾಲಿಬಾಲ್ ಕ್ರೀಡಾಕೂಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ರಂಗ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸುವಲ್ಲಿ ವಿಫಲವಾಗಿದೆ. ಆದರೆ ಖಾಸಗಿ ಶಾಲೆಗಳಲ್ಲಿ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದರಿಂದ ಶಿಕ್ಷಣದ ಜೊತೆ ಕ್ರೀಡಾ ಚಟುವಟಿಕೆಗಳಲ್ಲೂ ಯಶಸ್ಸು ಕಾಣುತ್ತಿವೆ. ಸರ್ಕಾರ ತಾಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡೆಗಳನ್ನು ನಡೆಸಲು ಇಟ್ಟಿರುವ ಆಯವ್ಯಯ ಬಹಳ ಕಡಿಮೆ ಇದೆ. ಕ್ರೀಡೆಗೆ ಮಹತ್ವ ಬರಲು ಶಿಕ್ಷಣ ಸಂಸ್ಥೆ ಮುಂದೆ ಬರಬೇಕಿದೆ. ಆದರೆ ಇಂದು ಜಿಲ್ಲಾ ಮಟ್ಟದ ಕ್ರೀಡೆಗಳನ್ನು ನಡೆಸಲು ಖಾಸಗಿ ಶಾಲೆಗಳು ಮುಂದೆ ಬಂದಿರುವುದು ಶ್ಲಾಘನೀಯ ಎಂದರು.