ಹಾಸನ :ಪ್ಲಾಸ್ಟಿಕ್ ಬ್ಯಾನ್ ಮಾಡಿದ್ರೂ ಕೂಡ ಮಾರಾಟ ಮಾತ್ರ ಹಾಸನ ನಗರದಲ್ಲಿ ನಿಂತಿಲ್ಲ. ಇದರಿಂದ ನಿತ್ಯ ತ್ಯಾಜ್ಯ ಹೆಚ್ಚಾಗುತ್ತಿದ್ದು, ನಗರದ ಸಂತೆಪೇಟೆ ಬಿಳಿ ರಾಶಿ ರಾಶಿ ಕಸ ಸಂಗ್ರಹವಾಗುತ್ತಿದೆ. ಎರಡು ವರ್ಷಗಳ ಹಿಂದೆ ಇದ್ದ ಪರಿಸ್ಥಿತಿ ಮತ್ತೆ ಮರುಕಳಿಸುತ್ತಿದ್ದು, ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಮತ್ತೊಮ್ಮೆ ನಿರ್ಮಾಣವಾಗಿದೆ.
ನಗರದ ಸುತ್ತಮುತ್ತ ಕಸದ ರಾಶಿಗಳು ಎದ್ದುಕಾಣುತ್ತಿವೆ. ಸಾರ್ವಜನಿಕರು ರಸ್ತೆ ಬದಿಯಲ್ಲಿ, ಪ್ರಮುಖ ಸ್ಥಳದಲ್ಲಿ ಮನೆ ಹಾಗೂ ಹೋಟೆಲ್ ತ್ಯಾಜ್ಯ ಬಿಸಾಡುತ್ತಿರುವುದರಿಂದ ನಿತ್ಯ ಟನ್ ಗಟ್ಟಲೇ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ನಗರಸಭೆ ಕೂಡಾ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದರಿಂದ ನಗರವಾಸಿಗಳು ರಾತ್ರಿವೇಳೆ ಮನೆಯ ಸಮೀಪದ ರಸ್ತೆ ಬದಿಯಲ್ಲಿಯೇ ಸುರಿಯುತ್ತಿರುವುದು ನೈರ್ಮಲ್ಯ ಹಾಳು ಮಾಡುತ್ತಿದೆ.
ಇದರಿಂದ ರಸ್ತೆಗಳಲ್ಲಿ ಓಡಾಡುವವರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗ್ತಿದೆ. ನಗರದ ಒಳಗೆ ಅಷ್ಟೇನೂ ಕಸದ ಸಮಸ್ಯೆ ಇಲ್ಲದಿದ್ದರೂ ನಗರದ ಹೊರವಲಯದಲ್ಲಿ, ರಸ್ತೆಗಳ ಪಕ್ಕದಲ್ಲಿ, ಕಸದ ಸಮಸ್ಯೆ ತೀವ್ರವಾಗಿದ್ದು, ಜೊತೆಗೆ ಈಗ ಮಳೆಗಾಲ ಕೂಡ ಶುರುವಾಗಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ಹೀಗೆ ಎಲ್ಲೆಂದರಲ್ಲಿ ಕಸ ಸುರಿಯುವವರ ಬಗ್ಗೆ ನಿಗಾವಹಿಸಲು ಪಾಲಿಕೆ ಈಗಾಗಲೇ ಕೆಲವು ಸೂಕ್ಷ್ಮ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಲು ಮುಂದಾಗಿದ್ದು, ಎಲ್ಲೆಂದರಲ್ಲಿ ಕಸ ಸುರಿಯುವವರಿಗೆ ಸ್ಥಳದಲ್ಲಿಯೇ ದಂಡ ವಿಧಿಸೋಕೆ ನಗರಸಭೆ ಮುಂದಾಗಿದೆ.